ADVERTISEMENT

ಸಾವರ್ಕರ್‌ ಚಿತ್ರ ತೆಗೆಸುವ ಕುರಿತ ಮಾತು: ಪ್ರಿಯಾಂಕ್ ಹೇಳಿಕೆಗೆ ಖಾದರ್‌ ಕುಟುಕು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 15:46 IST
Last Updated 8 ಡಿಸೆಂಬರ್ 2023, 15:46 IST
ಯು.ಟಿ.ಖಾದರ್‌
ಯು.ಟಿ.ಖಾದರ್‌   

ಬೆಳಗಾವಿ: ‘ಶಾಸಕರು ಮತ್ತು ಸಚಿವರು ಅಧಿವೇಶನಕ್ಕೆ ಸರಿಯಾದ ಸಮಯಕ್ಕೆ ಬರಬೇಕು. ಉತ್ತಮವಾಗಿ ಚರ್ಚೆ ನಡೆಸುವುದು, ಯೋಜನೆ ರೂಪಿಸುವುದು ಅವರ ಕೆಲಸ. ಅವರ ಕೆಲಸವನ್ನು ಅವರು ಚೆನ್ನಾಗಿ ಮಾಡಲಿ. ಯಾರು ಯಾವ ಕೆಲಸ ಮಾಡಬೇಕೋ ಅದೇ ಕೆಲಸವನ್ನು ಮಾಡಬೇಕು’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.

‘ನನಗೆ ಅಧಿಕಾರ ಕೊಟ್ಟರೆ ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿರುವ ಸಾವರ್ಕರ್‌ ಭಾವಚಿತ್ರ ತೆಗೆದು ನೆಹರೂ ಅವರ ಭಾವಚಿತ್ರ ಹಾಕಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಖಾದರ್ ಹೀಗೆ ಪ್ರತಿಕ್ರಿಯಿಸಿದರು. 

‘ಹಿಂದೆ ಏನು ಆಗಿದೆಯೋ ಅದರ ಬಗ್ಗೆ ವಿಮರ್ಶೆ ಮಾಡುವುದಿಲ್ಲ. ರಾಜ್ಯದಲ್ಲಿ ಸೌಹಾರ್ದ ಮೂಡಿಸುವುದು ನನ್ನ ಕೆಲಸ. ಯಾವುದನ್ನೂ ಕಿತ್ತು ಎಸೆಯುವುದು ನನ್ನ ಕೆಲಸವಲ್ಲ. ಅದರ ಬದಲಿಗೆ ಬೆಸೆಯುವುದು ನನ್ನ ಕೆಲಸ. ಸೌಹಾರ್ದ ಮೂಡಿಸುವುದೇ ನನ್ನ ಆದ್ಯತೆ’ ಎಂದು ತಿಳಿಸಿದರು.

ADVERTISEMENT

‘ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು ಇದೆ. ಅದರ ಮೇಲೆ ಎಲ್ಲರೂ ಓಡಾಡುತ್ತಾರಲ್ಲವೇ, ಹಾಗೆಯೇ ಮುಂದಾಲೋಚನೆಯಿಂದ ಕೆಲಸ ಮಾಡಬೇಕು. ಅನಗತ್ಯ ಬಿಕ್ಕಟ್ಟು ಹುಟ್ಟುಹಾಕುವ ಕೆಲಸ ಮಾಡಬಾರದು’ ಎಂದು ಖಾದರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.