ADVERTISEMENT

ಬೆಂಗಳೂರು | ಯುಎಪಿಎ ಪ್ರಕರಣ: ಮಾಜಿ ನಕ್ಸಲರ ಖುಲಾಸೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 16:29 IST
Last Updated 22 ಮೇ 2025, 16:29 IST
   

ಬೆಂಗಳೂರು: ಸರ್ಕಾರಕ್ಕೆ ಈಚೆಗೆ ಶರಣಾಗಿದ್ದ ನಕ್ಸಲ್‌ ಮುಖಂಡರಾದ ಮುಂಡಗಾರು ಲತಾ, ಕೋಟೆಹೊಂಡ ರವೀಂದ್ರ, ವನಜಾಕ್ಷಿ ಮತ್ತು ಸಾವಿತ್ರಿ ಅವರ ವಿರುದ್ಧ ದಾಖಲಾಗಿದ್ದ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಪ್ರಕರಣಗಳಲ್ಲಿ, ಅವರನ್ನು ಖುಲಾಸೆ ಮಾಡಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಗುರುವಾರ ತೀರ್ಪು ನೀಡಿದೆ.

ಶೃಂಗೇರಿಯ ಬುಕ್ಕಡಿಬೈಲು ಬಸ್‌ ನಿಲ್ದಾಣದ ಅಂಗಡಿಯೊಂದರ ಗೋಡೆ ಮೇಲೆ ಲತಾ, ರವೀಂದ್ರ ಮತ್ತು ಸಾವಿತ್ರಿ ಅವರು ಕರಪತ್ರಗಳನ್ನು ಅಂಟಿಸಿ, ಸರ್ಕಾರಿ ವಿರೋಧಿ ಘೋಷಣೆ ಕೂಗಿದ್ದರು ಎಂದು ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ, 2009ರಲ್ಲಿ ಯುಎಪಿಎ ಪ್ರಕರಣ ದಾಖಲಿಸಲಾಗಿತ್ತು.

2005ರಲ್ಲಿ ಲತಾ, ರವೀಂದ್ರ ಮತ್ತು ವನಜಾಕ್ಷಿ ಅವರು ಶೃಂಗೇರಿ ತಾಲ್ಲೂಕಿನ ನೆಮ್ಮಾರಿನಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಗಂಗಾಧರ ಶೆಟ್ಟಿ ಎಂಬುವವರ ಬೈಕ್‌ ಸುಟ್ಟಿದ್ದರು ಮತ್ತು ಮಾವೋವಾದಿ ಪರ ಘೋಷಣೆ ಕೂಗಿದ್ದರು ಎಂಬ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ADVERTISEMENT

ಮುಂಡಗಾರು ಲತಾ ಮತ್ತು ಇತರರು 2018ರಲ್ಲಿ ಥಣಿಕೋಡು ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ಸ್ಪೋಟಕ ಎಸೆದು ದಾಖಲೆಗಳನ್ನು ಸುಟ್ಟಿದ್ದರು. ₹34,000 ನಷ್ಟ ಉಂಟು ಮಾಡಿದ್ದರು ಎಂದು ಮತ್ತೊಂದು ಯುಎಪಿಎ ಪ್ರಕರಣ ದಾಖಲಿಸಲಾಗಿತ್ತು.

ಬೆಂಗಳೂರಿನ, ಯುಎಪಿಎ ಪ್ರಕರಣ ವಿಶೇಷ ನ್ಯಾಯಾಲಯವು ಈ ಪ್ರಕರಣಗಳ ವಿಚಾರಣೆ ನಡೆಸಿತ್ತು. ‘ಈ ಎಲ್ಲ ಪ್ರಕರಣಗಳಲ್ಲಿ, ಈ ನಾಲ್ವರೇ ಕೃತ್ಯ ಎಸಗಿದ್ದಾರೆ ಎಂಬುದನ್ನು ಸಾಬೀತು ಮಾಡುವಲ್ಲಿ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ ಇವರ ವಿರುದ್ಧ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಿರುವ ಪ್ರಕರಣಗಳನ್ನು ವಜಾ ಮಾಡಬಹುದಾಗಿದೆ’ ಎಂದು ನ್ಯಾಯಾಧೀಶ ಸಿ.ಎಂ. ಗಂಗಾಧರ ಅವರು ತೀರ್ಪು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.