ADVERTISEMENT

ಠಾಕ್ರೆ ಹೇಳಿಕೆ ಚೀನಾ ವಿಸ್ತರಣಾವಾದವನ್ನು ಧ್ವನಿಸುತ್ತಿದೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 6:33 IST
Last Updated 18 ಜನವರಿ 2021, 6:33 IST
 ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ    

ಬೆಂಗಳೂರು: ‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ’ ಎಂದಿರುವ ಉದ್ಧವ್‌ ಠಾಕ್ರೆ ಅವರ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಒಕ್ಕೂಟ ವ್ಯವಸ್ಥೆ ಒಪ್ಪಿ, ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆಯುತ್ತಿರುವಾಗ ಇಂಥ ವಿಸ್ತರಣಾವಾದ ಸೌಹಾರ್ದಕ್ಕೆ ಧಕ್ಕೆ ತರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ್ದು ಮಾತ್ರವಲ್ಲ,ಅಲ್ಲಿ ವಿಧಾನಸಭೆ ಅಧಿವೇಶನ ನಡೆಯಬೇಕೆಂದು ತೀರ್ಮಾನಿಸಲಾಯಿತು. ಸುವರ್ಣ ಸೌಧ ಮಹಾರಾಷ್ಟ್ರಕ್ಕೆ ಪ್ರತ್ಯುತ್ತರವಾಗಿ ನಿಂತಿರುವ ಒಂದು ನಿರ್ಮಿತಿ. ಅದನ್ನು ಅರಿಯುವ ವಿಚಾರದಲ್ಲಿ ನಮ್ಮಲ್ಲಿನ ಕೆಲವರೂ ಎಡವಿದ್ದಾರೆ ಎಂಬುದೂ ವಾಸ್ತವ. ಅದರ ಸಮರ್ಪಕ ಬಳಕೆಯಿಂದ ಮಾತ್ರ ಅದರ ಉದ್ದೇಶ ಸಾಕಾರ ಎಂದಿದ್ದಾರೆ.

ADVERTISEMENT


ಇದೇವೇಳೆ, ಬೆಳಗಾವಿ ನಮ್ಮದೆಂಬ ಮಹಾರಾಷ್ಟ್ರಕ್ಕೆ ತಿರುಗೇಟು ನೀಡುವುದು ಒಂದೆಡೆ ಇರಲಿ. ಆದರೆ, ಅಲ್ಲಿನ ಜನರಲ್ಲಿ ಕನ್ನಡಾಭಿಮಾನ ಉತ್ಕಟವಾಗಿದೆ. ಚಿಕ್ಕೋಡಿಯ ಕನ್ನಡ ಪ್ರೇಮಿಗಳಾದ ಸಿದ್ದಗೌಡ–ಅಶ್ವಿನಿ ಪಾಟೀಲ ದಂಪತಿ ತಮ್ಮ ಚೊಚ್ಚಲ ಮಗುವಿಗೆ ‘ಕನ್ನಡದ ವೃದ್ಧಿ’ ಎಂಬ ಹೆಸರಿಟ್ಟಾದರೆ. ಇದು ಅಲ್ಲಿನ ಕನ್ನಡಾಭಿಮಾನಕ್ಕೆ ಸಾಕ್ಷಿ. ಆ ದಂಪತಿಗೆ ನನ್ನ ನಮನ ಎಂದು ಹೇಳಿದ್ದಾರೆ.

ಇದನ್ನೂ ಓದಿ.. ಉದ್ಧವ್ ಠಾಕ್ರೆ ಉದ್ಧಟತನ ಪ್ರದರ್ಶಿಸಿದ್ದಾರೆ: ಯಡಿಯೂರಪ್ಪ ಕಿಡಿ

’ಬಹುಸಂಖ್ಯೆಯಲ್ಲಿ ಮರಾಠಿ ಮಾತನಾಡುವ ಮತ್ತು ಸಂಸ್ಕೃತಿ ಹೊಂದಿರುವ ಪ್ರದೇಶಗಳನ್ನು ಮಹಾರಾಷ್ಟಕ್ಕೆ ಸೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಗಡಿ ವಿಷಯಕ್ಕಾಗಿ ಹೋರಾಟ ನಡೆಸಿ ಹುತಾತ್ಮರಾದವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಇದಾಗಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಟ್ವೀಟ್‌ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.