ADVERTISEMENT

ಸೌಹಾರ್ದ ಯುಗಾದಿ: ಬಸವ ಸನ್ನಿಧಿಯ ಭಾವೈಕ್ಯ

ಪರಿಶಿಷ್ಟರು ತರುವ ನೀರಿನಿಂದಲೇ ಗದ್ದುಗೆಗೆ ಗಂಧ ಲೇಪನ, ಮುಸ್ಲಿಮರಿಂದ ಕುರಾನ್‌ ಪಠಣ

ಬಿ.ಜಿ.ಪ್ರವೀಣಕುಮಾರ
Published 13 ಏಪ್ರಿಲ್ 2021, 1:59 IST
Last Updated 13 ಏಪ್ರಿಲ್ 2021, 1:59 IST
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೋಡೆಕಲ್ಲ ಗ್ರಾಮದ ಕಾಲಜ್ಞಾನಿ ಬಸವೇಶ್ವರ ದೇವಸ್ಥಾನ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೋಡೆಕಲ್ಲ ಗ್ರಾಮದ ಕಾಲಜ್ಞಾನಿ ಬಸವೇಶ್ವರ ದೇವಸ್ಥಾನ   

ಮನುಷ್ಯರ ನಡುವೆ ಅಪನಂಬಿಕೆ ಹೆಚ್ಚುತ್ತಿರುವ ವಿಷಮ ಕಾಲಘಟ್ಟದಲ್ಲಿ ಮನಸ್ಸಿಗೆ ಮುದ ನೀಡುವ ಯುಗಾದಿ ಬಂದಿದೆ. ಹೊಸ ವರ್ಷದ ಹರ್ಷದ ಜತೆಗೆ ಈ ಯುಗಾದಿಯು ಮನಸ್ಸುಗಳನ್ನು ಬೆಸೆಯುವ ಸಂದರ್ಭವೂ ಹೌದು. ರಾಜ್ಯದ ಕೆಲವೆಡೆಗಳಲ್ಲಿರುವ ಮಾದರಿ ಎನ್ನಬಹುದಾದ ಸಾಮರಸ್ಯದ ನಿದರ್ಶನಗಳನ್ನು ಹೆಕ್ಕಿ ತಂದು ನಿಮ್ಮ ಮುಂದಿರಿಸಿದ್ದೇವೆ

ಯಾದಗಿರಿ: ಹುಣಸಗಿ ತಾಲ್ಲೂಕಿನ ಪುಟ್ಟ ಗ್ರಾಮ ಕೋಡೆಕಲ್ಲ, ಕಾಲಜ್ಞಾನಿ ಬಸವೇಶ್ವರ ದೇವಸ್ಥಾನದಿಂದ ಪ್ರಸಿದ್ಧ. ಇದು ಭಾವೈಕ್ಯದ ತಾಣವಾಗಿಯೂ ಹೆಸರು ಪಡೆದಿದೆ. ಯುಗಾದಿ ಹಬ್ಬದ ವೇಳೆ ಇಲ್ಲಿ ವಿಶಿಷ್ಟ ಪೂಜೆ ಜರುಗುತ್ತದೆ.

ಗ್ರಾಮದ ಪಕ್ಕದಲ್ಲಿರುವ ಕೃಷ್ಣಾ ನದಿಯಿಂದ ಪರಿಶಿಷ್ಟ ಸಮುದಾಯದವರು ತರುವ ನೀರಿನಿಂದ ಕೋಡೆಕಲ್ಲ ಕಾಲಜ್ಞಾನಿ ಬಸವೇಶ್ವರ ಗದ್ದುಗೆಗೆ ಗಂಧದ ಲೇಪನ ಮಾಡಲಾಗುತ್ತದೆ. ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಿದು.

ADVERTISEMENT

ಯುಗಾದಿ ಅಮಾವಾಸ್ಯೆ ದಿನ ನಸುಕಿನ 5 ಗಂಟೆಗೆ ಪರಿಶಿಷ್ಟರು ನದಿಯಲ್ಲಿ ಸ್ನಾನ ಮಾಡಿಕೊಂಡು ಅಲ್ಲಿಂದ ಮಡಿ ನೀರು ಹೊತ್ತು ತರುತ್ತಾರೆ. ಅವರೆಲ್ಲ ಗ್ರಾಮದ ಸಮೀಪದ ಒಂದು ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಾರೆ. ನಂತರ ಗ್ರಾಮಸ್ಥರು ಅವರನ್ನು ವಾದ್ಯಮೇಳ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ.

ಆ ನೀರಿನಿಂದಲೇಸ್ನಾನ ಮಾಡಿ ಬಸವೇಶ್ವರ ಗದ್ದುಗೆಗೆ ಗಂಧ ಲೇಪನ ಮಾಡುತ್ತಾರೆ. ಆ ನಂತರ ಮತ್ತೊಮ್ಮೆ ಸ್ನಾನ ಮಾಡುತ್ತಾರೆ. ಹೀಗೆ ಎಲ್ಲ ಪೂಜೆ ಮುಗಿದ ನಂತರ ಮುಸ್ಲಿಮರಿಂದ ಕುರಾನ್ ಪಠಣವೂ ನಡೆಯುತ್ತದೆ. ಈ ಮೂಲಕ ಕೋಡೆಕಲ್ಲ ಮಠದಲ್ಲಿ ಭಾವೈಕ್ಯದ ಆರಾಧನೆ ನಡೆಯುತ್ತದೆ.

‘ಇದು ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಬಸವೇಶ್ವರರ ಲೆಕ್ಕದಲ್ಲಿ ಎಲ್ಲ ಸಮುದಾಯವರು ಒಂದೇ. ಹೀಗಾಗಿ ಒಂದೊಂದು ಸಮುದಾಯಕ್ಕೆ ಒಂದೊಂದು ಸೇವೆ ಸಲ್ಲಿಸುವ ಅವಕಾಶ ಇಲ್ಲಿದೆ. ಈ ಬಾರಿ ಕೊರೊನಾ ಕಾರಣದಿಂದ ಸರಳವಾಗಿ ಪೂಜೆ ನೆರವೇರಿಸಲಾಗುವುದು’ ಎಂದುಮಹಲಿನಮಠ ದೇವಸ್ಥಾನದ ವೃಷಭೇಂದ್ರ ಅಪ್ಪ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.