ಸಿದ್ದರಾಮಯ್ಯ
ಬೆಂಗಳೂರು: ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವ ‘ಕೃಷ್ಣಾ ಮೇಲ್ದಂಡೆ ಯೋಜನೆ–3’ ನೇ ಹಂತದ ಯೋಜನೆಗಾಗಿ ಮುಳುಗಡೆ ಆಗುವ ಮತ್ತು ನಾಲೆಗಾಗಿ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಮಂಗಳವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಹಾರದ ದರ ನಿಗದಿ ಮಾಡಲಾಗಿದೆ.
2023ರಿಂದ ನನೆಗುದಿಯಲ್ಲಿದ್ದ ದರ ನಿಗದಿ ವಿಚಾರ ಇದೀಗ ತಾರ್ಕಿಕ ಅಂತ್ಯವನ್ನು ತಲುಪಿದೆ. ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಸಿದ್ದರಾಮಯ್ಯ ಮಾತನಾಡಿ, ‘ಪರಿಹಾರ ನಿಗದಿ ಮಾಡುವ ವಿಚಾರವಾಗಿ ರೈತರು, ಹೋರಾಟ ನಿರತ ಸಂಘಟನೆಗಳ ಮುಖಂಡರು, ಶಾಸಕರು ಮತ್ತು ಸಚಿವರ ಜತೆ ಹಲವು ಸುತ್ತಿನ ಚರ್ಚೆ ನಡೆಸಿದ್ದೇವೆ. ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ ಮತ್ತು ಒಣ ಭೂಮಿಗೆ ಎಕರೆಗೆ ₹30 ಲಕ್ಷ ಪರಿಹಾರ ನೀಡಲು ಒಪ್ಪಿಗೆ ನೀಡಲಾಗಿದೆ’ ಎಂದರು.
ಅಲ್ಲದೇ, ಕಾಲುವೆಗಾಗಿ ಸುಮಾರು 51,837 ಎಕರೆ ಬೇಕಾಗುತ್ತದೆ. ಇದರಲ್ಲಿ 23,631 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಕೈಗೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಜಮೀನಿಗೆ ಸಂಬಂಧಿಸಿದಂತೆ ನೀರಾವರಿ ಜಮೀನಿಗೆ ಎಕರೆಗೆ ₹30 ಲಕ್ಷ ಮತ್ತು ಒಣ ಭೂಮಿಗೆ ಎಕರೆಗೆ ₹25 ಲಕ್ಷ ದರ ನಿಗದಿ ಮಾಡಲು ತೀರ್ಮಾನಿಸಲಾಗಿದೆ. ಕಾಲುವೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡವರು ಯೋಜನೆಯ ಫಲಾನುಭವಿಗಳಾಗುತ್ತಾರೆ. ಆದ್ದರಿಂದ ಕಡಿಮೆ ದರ ನಿಗದಿ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಅಣೆಕಟ್ಟಿನ ಎತ್ತರ ಹೆಚ್ಚಿಸುವುದರಿಂದ ಹಿನ್ನೀರಿನಿಂದ ಸುಮಾರು 75 ಸಾವಿರ ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುತ್ತದೆ. 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಬಹುದು. ಇದರಿಂದ ಈ ಭಾಗದ ಜನರ ಜೀವನಮಟ್ಟವೂ ಸುಧಾರಣೆ ಆಗಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಉಪಸ್ಥಿತರಿದ್ದರು.
ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣೆ ಪೂರ್ವದಲ್ಲಿ ನಾವು ಈ ಕುರಿತು ಭರವಸೆ ನೀಡಿದ್ದೆವು. ಆ ಪ್ರಕಾರವೇ ನಡೆದುಕೊಂಡಿದ್ದೇವೆ.– ಸಿದ್ದರಾಮಯ್ಯ, ಮುಖ್ಯಮಂತ್ರಿ
ಯಾವ ಜಮೀನಿಗೆ ಎಷ್ಟು ಪರಿಹಾರ?
ಮುಳುಗಡೆ ಜಮೀನು
* ನೀರಾವರಿ ಜಮೀನಿಗೆ ₹40 ಲಕ್ಷ
* ಒಣ ಭೂಮಿಗೆ ₹30 ಲಕ್ಷ
ಕಾಲುವೆಗಾಗಿ ಜಮೀನು
* ನೀರಾವರಿ ಜಮೀನು ₹30 ಲಕ್ಷ
* ಒಣ ಭೂಮಿ ₹25 ಲಕ್ಷ
ಪುನರ್ವಸತಿಗೆ ಹೊಸ ನೀತಿ, ಪರಿಹಾರಕ್ಕೆ ಪ್ರಾಧಿಕಾರ:ಡಿಕೆಶಿ
‘ಈ ಯೋಜನೆಗೆ ಸಂಬಂಧಿಸಿದಂತೆ ಪುನರ್ವಸತಿಗಾಗಿ ಹೊಸ ನೀತಿ ರೂಪಿಸಲು ತೀರ್ಮಾನಿಸಿದ್ದೇವೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
‘ಭೂಸ್ವಾಧೀನದ ವಿಚಾರವಾಗಿ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿವೆ. 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಈ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣವಿಲ್ಲದ ಜಮೀನುಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗುವುದು’ ಎಂದರು.
‘2013ರ ಭೂ ಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯ ಸೆಕ್ಷನ್ 51ರ ಅಡಿ ಭೂಸ್ವಾಧೀನ, ಪುನರ್‌ವಸತಿ ಪ್ರಾಧಿಕಾರವನ್ನು ರಚಿಸಲು ಅವಕಾಶವಿದೆ. ಹೀಗಾಗಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಪ್ರಾಧಿಕಾರವನ್ನು ರಚಿಸಲಿದೆ. ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರಾಧಿಕಾರ ರಚನೆ ಆಗಲಿದೆ’ ಎಂದು ಶಿವಕುಮಾರ್ ಹೇಳಿದರು.
ಯೋಜನೆಗೆ ಅಗತ್ಯವಿರುವ ಜಮೀನು: 1,33,867 ಎಕರೆ
ಮುಳುಗಡೆ ಆಗುವ ಜಮೀನು: 75,563 ಎಕರೆ
ಕಾಲುವೆ ನಿರ್ಮಾಣಕ್ಕೆ ಜಮೀನು: 51,837 ಎಕರೆ
ರೈತರ ಪುನರ್‌ವಸತಿ ಮತ್ತು ಪುನರ್‌ವ್ಯವಸ್ಥೆಗೆ: 6,469 ಎಕರೆ
ಮುಳುಗಡೆ ಆಗುವ ಗ್ರಾಮಗಳು, ಪಟ್ಟಣ ವಾರ್ಡ್‌ಗಳು: 20
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.