ADVERTISEMENT

ಯುಕೆಪಿ: ಭೂಸ್ವಾಧೀನ ಕ್ರಮ ಎತ್ತಿಹಿಡಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 16:42 IST
Last Updated 21 ಜುಲೈ 2022, 16:42 IST
   

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಮುಳುಗಡೆ ಸಂತ್ರಸ್ತರ ಪುನರ್ವಸತಿ ಉದ್ದೇಶಕ್ಕಾಗಿ 1,643 ಎಕರೆ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡ ಸರ್ಕಾರದ ಕ್ರಮವನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಎತ್ತಿಹಿಡಿದಿದೆ.

ಈ ಸಂಬಂಧ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಬಾಗಲಕೋಟೆಯ ಗೋಪಾಲ, ರವಿ ಸೇರಿದಂತೆ 25 ಕೃಷಿಕರು ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಪಿ.ಕೃಷ್ಣಭಟ್ ಅವರಿದ್ದ ಧಾರವಾಡದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.

‘ಸರ್ಕಾರವು, ನವನಗರಗಳನ್ನು ನಿರ್ಮಾಣ ಮಾಡುವಾಗ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಂಡಾಗ ಅದಕ್ಕೆ ಅನೇಕ ಸವಾಲುಗಳಿರುತ್ತವೆ. ಮುಳುಗಡೆ ಪ್ರದೇಶದ ಜನರಿಗೆ ನವನಗರ ಕಟ್ಟಿಕೊಡುವಾಗ ಪ್ರಚಲಿತ ವಿದ್ಯಮಾನಗಳನ್ನು ಗಮನದಲ್ಲಿ ಇರಿಸಿಕೊಂಡೇ ಮುಂದುವರಿಯಬೇಕಾಗುತ್ತದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ADVERTISEMENT

‘ಹಿಂದೆ ಇದ್ದ ರೀತಿಯಲ್ಲೇ ಹೊಸ ನಗರಗಳನ್ನೂ ನಿರ್ಮಾಣ ಮಾಡಬೇಕೆಂಬ ಧೋರಣೆ ಸಮರ್ಪಕ ಎನಿಸುವುದಿಲ್ಲ. ಸಾರ್ವಜನಿಕರ ಮೂಲಭೂತ ಅಗತ್ಯಗಳನ್ನು ಪೂರೈಸಲು ವಿಶ್ವವಿದ್ಯಾಲಯ, ಕಾಲೇಜು, ದವಾಖಾನೆ ಇತ್ಯಾದಿಗಳ ದೊಡ್ಡ ಪಟ್ಟಿಯೇ ಇರುತ್ತದೆ. ಅವುಗಳನ್ನೆಲ್ಲಾ ಜನರಿಗೆ ಮರು ಕಲ್ಪಿಸಿಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಆದ್ದರಿಂದ, ಈ ಪ್ರಕರಣದಲ್ಲಿ ಮುಚಖಂಡಿ ಮತ್ತು ಬಾಗಲಕೋಟೆ ಗ್ರಾಮ ವ್ಯಾಪ್ತಿಯ 1,643 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡ ಸರ್ಕಾರದ ಕ್ರಮ ನ್ಯಾಯೋಚಿತವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಆಲಮಟ್ಟಿ ಆಣೆಕಟ್ಟು ಎತ್ತರವನ್ನು 523 ರಿಂದ 525 ಮೀಟರ್‌ಗೆ ಎತ್ತರಿಸುವಂತೆ ನ್ಯಾಯಮಂಡಳಿ ನೀಡಿದ್ದ ತೀರ್ಪಿನ ಅನುಸಾರ ಮುಳುಗಡೆ ಪ್ರದೇಶದ ವಿಸ್ತೀರ್ಣವೂ ಹೆಚ್ಚಾಗಿತ್ತು. ಈ ನಿಟ್ಟಿನಲ್ಲಿ ಬಾಗಲಕೋಟೆಯ ನವನಗರ ನಿರ್ಮಾಣಕ್ಕಾಗಿ ಮತ್ತಷ್ಟು ಕೃಷಿ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಸರ್ಕಾರದ ಈ ಕ್ರಮವನ್ನು ರೈತರು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.