ADVERTISEMENT

ಜಾಧವ ರಾಜೀನಾಮೆ: ಈಗೇನೂ ಸಮಸ್ಯೆಯಿಲ್ಲ, ಆದರೆ...

ವಿಧಾನ ಸಭಾಧ್ಯಕ್ಷರ ಕ್ರಮ: ಕಾನೂನು ತಜ್ಞರಿಂದ ವ್ಯಕ್ತವಾದ ವಿಭಿನ್ನ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 19:00 IST
Last Updated 9 ಮಾರ್ಚ್ 2019, 19:00 IST
ಡಾ.ಉಮೇಶ ಜಾಧವ
ಡಾ.ಉಮೇಶ ಜಾಧವ   

ಬೆಂಗಳೂರು: ಚಿಂಚೋಳಿಯ ಡಾ.ಉಮೇಶ್‌ ಜಾಧವ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ನಡೆ ಮತ್ತು ಈ ಕುರಿತಂತೆ ವಿಧಾನ ಸಭಾಧ್ಯಕ್ಷರು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಕಾನೂನು ತಜ್ಞರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್‌ನ ಹಿರಿಯ ವಕೀಲ ಪಿ.ಎಸ್‌.ರಾಜಗೋಪಾಲ್‌ ಅವರು ಈ ಕುರಿತಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಜಾಧವ್‌, ವಿಧಾನ ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿರಬಹುದು. ಆದರೆ, ಅದಿನ್ನೂ ಅಂಗೀಕಾರವಾಗಿಲ್ಲ. ಅವರ ವಿರುದ್ಧ ಈಗಾಗಲೇ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ನೀಡಲಾಗಿರುವ ದೂರು ವಿಚಾರಣೆಗೆ ಬಾಕಿ ಇದೆಯೆಲ್ಲಾ’ ಎಂದು ಪ್ರಶ್ನಿಸಿದರು.

‘ಅವರು ಬಿಜೆಪಿಯಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬರಬಹುದು. ಆದರೆ, ಆ ವೇಳೆ ವಿಧಾನ ಸಭಾಧ್ಯಕ್ಷರು ಅವರ ರಾಜೀನಾಮೆ ಅಂಗೀಕರಿಸದೆ ಹಾಗೆಯೇ ಇಟ್ಟುಕೊಂಡಿದ್ದರೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಸಮಸ್ಯೆ ಎದುರಾಗಲಿದೆ’ ಎಂದರು.

ADVERTISEMENT

ಈ ಮಾತಿಗೆ ಭಿನ್ನ ನಿಲುವುವ್ಯ‌ಕ್ತಪಡಿಸಿದ ಮತ್ತೊಬ್ಬ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ‘ಒಬ್ಬ ಶಾಸಕ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾನೊ ಅಥವಾ ಒತ್ತಡಕ್ಕೆ ಮಣಿದು ನೀಡಿದ್ದಾನೊ ಎಂಬುದನ್ನಷ್ಟೇ ವಿಧಾನ ಸಭಾಧ್ಯಕ್ಷರು ಪರಿಶೀಲಿಸಬೇಕು. ಈ ವಿಷಯದಲ್ಲಿ ಅವರದ್ದು ಸೀಮಿತ ಅಧಿಕಾರ’ ಎಂದು ಹೇಳಿದರು.

‘ಖುದ್ದು ಜಾಧವ ಅವರೇ ವಿಧಾನ ಸಭಾಧ್ಯಕ್ಷರನ್ನು ಕಂಡು ರಾಜೀನಾಮೆ ನೀಡಿರುವುದರಿಂದ ಅದನ್ನು ಅವರು ತಕ್ಷಣವೇ ಅಂಗೀಕರಿಸಬೇಕು. ಈ ಹಿಂದೆ ಹಲವು ಸಂದರ್ಭಗಳಲ್ಲಿ ನಾನು ಅಡ್ವೊಕೇಟ್ ಜನರಲ್‌ ಆಗಿದ್ದಾಗ ಇಂತಹ ಸಮಸ್ಯೆಗಳು ಎದುರಾದಾಗ, ವಿಧಾನ ಸಭಾಧ್ಯಕ್ಷರು ಬಹಳ ದಿನ ರಾಜೀನಾಮೆಯನ್ನು ಇತ್ಯರ್ಥ ಮಾಡದೇ ಉಳಿಸಿಕೊಳ್ಳುವಂತಿಲ್ಲ ಎಂದು ತಿಳಿಸಿದ್ದೇನೆ’ ಎಂದು ವಿವರಿಸಿದರು.

ಅವಶ್ಯವಿದ್ದರೆ ವಿಚಾರಣೆಗೆ ಹಾಜರ್‌

ಕಲಬುರ್ಗಿ: ‘ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಕಾನೂನು ಪ್ರಕಾರ ಅಂಗೀಕಾರವಾಗುತ್ತದೆ. ಅವಶ್ಯವಿದ್ದರೆ ಮಾ.12ರಂದು ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ಡಾ.ಉಮೇಶ ಜಾಧವ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶಕುಮಾರ್ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ನ್ಯಾಯಯುತವಾಗಿ ಕ್ರಮಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

‘ನನಗೆ ಇದುವರೆಗೂ ನೋಟಿಸ್ ತಲುಪಿಲ್ಲ. ಮಾಧ್ಯಮಗಳಲ್ಲಿ ನೋಡಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರೈವೆಟ್ ಲಿಮಿಟೆಡ್ ಕಂಪನಿ: ‘ಕಲಬುರ್ಗಿ ಜಿಲ್ಲೆಯಲ್ಲಿ ಕಾಂಗ್ರೆಸ್ಪಕ್ಷವು ಪ್ರೈವೆಟ್ ಲಿಮಿಟೆಡ್ ಕಂಪನಿಯಾಗಿದೆ. ತಮ್ಮ ಅನುಕೂಲಕ್ಕಾಗಿ ಅನೇಕ ನಾಯಕರನ್ನು ಪಕ್ಷದಿಂದ ಹೊರಹಾಕಿದ್ದಾರೆ’ ಎಂದು ಸಂಸದ ಮಲ್ಲಿಕಾರ್ಜುನ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

‘ಡಾ.ಉಮೇಶ ಜಾಧವ ಅಲ್ಲ, ಡಾ.ಆಮಿಷ್ ಜಾಧವ’ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಜಾಧವ, ‘ನಾನು ಬಿಜೆಪಿಯವರಿಂದ ದುಡ್ಡು ಪಡೆದಿದ್ದರೆ ಜಗತ್ತಿನ ಯಾವುದೇ ಏಜೆನ್ಸಿ ಮೂಲಕ ತನಿಖೆ ನಡೆಸಲಿ. ಅದು ಬಿಟ್ಟು ವಿನಾಕಾರಣ ಆರೋಪ ಮಾಡುವುದನ್ನು ನಿಲ್ಲಿಸಲಿ. ನನ್ನ ಬಳಿಯೂ ಅಸ್ತ್ರಗಳಿವೆ, ಮುಂದಿನ ದಿನಗಳಲ್ಲಿ ಅವುಗಳನ್ನು ಪ್ರಯೋಗಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.