ADVERTISEMENT

ಅಕ್ಕಿ ಪೂರೈಕೆಯಲ್ಲಿ ಕತ್ತಿ ಎಡವಿದ್ದಾರೆ: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 13 ಮೇ 2021, 10:11 IST
Last Updated 13 ಮೇ 2021, 10:11 IST
   

ಬೆಂಗಳೂರು: ಆಹಾರ ಸಚಿವ ಉಮೇಶ ಕತ್ತಿ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ಸಮರ್ಪಕವಾಗಿ ಅಕ್ಕಿ ಪೂರೈಕೆ ಮಾಡುವುದರಲ್ಲಿ ಎಡವಿದ್ದಾರೆ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಅಧಿಕಾರಿಗಳಿಂದ ಪ್ರೇರೇಪಿತರಾಗಿ ಇಲ್ಲ ಸಲ್ಲದ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಈ ಹಿಂದೆ ಇದ್ದಂತೆ ಪಡಿತರ ಚೀಟಿ ಹೊಂದಿರುವವರಿಗೆ ತಲಾ 5 ಕೆ.ಜಿ ಅಕ್ಕಿ ಪೂರೈಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜನರು ಸಾವು ಬದುಕಿನ ನಡುವೆ ಹೋರಾಡುವಾಗ ನಾವು ರಾಜಕಾರಣ ಮಾಡಬಾರದು ಎಂದರು.

ADVERTISEMENT

ಉಮೇಶ ಕತ್ತಿಯವರು ಉಡಾಫೆ ಉತ್ತರ ಮತ್ತು ವ್ಯಂಗ್ಯವಾದ ಹೇಳಿಕೆಗಳ ಮೂಲಕ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ. ಸೋತವರೊಬ್ಬರು ದೆಹಲಿಗೆ ಹೋಗಿ ಲಾಬಿ ಮಾಡಿದಾಕ್ಷಣ ಮುಖ್ಯಮಂತ್ರಿ ಹುದ್ದೆಯನ್ನು ಬದಲಾವಣೆ ಮಾಡುವುದಿಲ್ಲ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.