ADVERTISEMENT

ಎಲ್ಲ ಇಲಾಖೆಗಳಿಗೆ ಜವಳಿ ಇಲಾಖೆಯಿಂದಲೇ ಸಮವಸ್ತ್ರ: ಶ್ರೀಮಂತ ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 20:34 IST
Last Updated 5 ಫೆಬ್ರುವರಿ 2021, 20:34 IST
ಸಚಿವ ಶ್ರೀಮಂತ ಪಾಟೀಲ
ಸಚಿವ ಶ್ರೀಮಂತ ಪಾಟೀಲ   

ಬೆಂಗಳೂರು: ‘ಮುಂದಿನ ವರ್ಷದಿಂದ ರಾಜ್ಯದ ಎಲ್ಲ ಇಲಾಖೆಗಳಿಗೆ ಸಮವಸ್ತ್ರಗಳನ್ನು ಜವಳಿ ಇಲಾಖೆಯ ನಿಗಮ
ಗಳಿಂದಲೇ ಪೂರೈಕೆ ಮಾಡಲಾಗುವುದು. ಹೊರ ರಾಜ್ಯಗಳಿಂದ ಬಟ್ಟೆ ಆಮದು ಮಾಡುವುದನ್ನು ನಿಲ್ಲಿಸಿ ಸ್ಥಳೀಯ ನೇಕಾರರಿಗೆ ಆದ್ಯತೆ ನೀಡಲಾಗುವುದು’ ಎಂದು ಕೈಮಗ್ಗ ಹಾಗೂ ಜವಳಿ ಸಚಿವ ಶ್ರೀಮಂತ ಪಾಟೀಲ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ವರ್ಷದಿಂದ ಸಮವಸ್ತ್ರಕ್ಕೆ ರಾಜ್ಯದ ನೇಕಾರರ ಬಟ್ಟೆಯನ್ನೇ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

‘ಸಮವಸ್ತ್ರಕ್ಕೆ ಮೂರು ಕೋಟಿ ಮೀಟರ್‌ಗೂ ಹೆಚ್ಚು ಬಟ್ಟೆಯ ಅವಶ್ಯಕತೆ ಇದೆ. ಟೆಂಡರ್ ಕರೆದು ಹೊರರಾಜ್ಯದಿಂದ ತರಿಸುವ ಬದಲು ನಮ್ಮ ನೇಕಾರರಿಗೆ ಅವಕಾಶ ನೀಡಿದರೆ ಅವರಿಗೂ ಒಳ್ಳೆಯದಾಗಲಿದೆ. ಜವಳಿ ಇಲಾಖೆಯ ಮೂಲಕವೇ ಖರೀದಿಸುವ ವ್ಯವಸ್ಥೆ ಆಗಬೇಕು’ ಎಂದು ಭಾರತಿ ಶೆಟ್ಟಿ ಸಲಹೆ ನೀಡಿದರು.

ADVERTISEMENT

‘ರಾಜ್ಯ ಸರ್ಕಾರದ ಇಲಾಖೆಗಳಿಗೆ ಜವಳಿ ಇಲಾಖೆಯಿಂದಲೇ ಸಮವಸ್ತ್ರ ಪೂರೈಸುವ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇನೆ. ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ಹೊರ ರಾಜ್ಯದಿಂದ ಬಟ್ಟೆ ಖರೀದಿಸುವುದನ್ನು ಮುಂದಿನ ವರ್ಷದಿಂದ ನಿಲ್ಲಿಸಲು ನಿರ್ಧರಿಸಲಾಗಿದೆ’ ಎಂದರು.

‘ತಮಿಳುನಾಡಿನಲ್ಲಿ ಯಾವ ರೀತಿ ಸಮವಸ್ತ್ರ ಕೊಡುತ್ತಿದ್ದಾರೆ ಎಂದು ನೋಡಲು ಜವಳಿ ಆಯುಕ್ತರು ಆ ರಾಜ್ಯಕ್ಕೆ ಹೋಗಿದ್ದಾರೆ. ಶೀಘ್ರದಲ್ಲಿ ಅವರು ವರದಿ ನೀಡಲಿದ್ದಾರೆ’ ಎಂದೂ ಸಚಿವರು ತಿಳಿಸಿದರು.

ಮಧ್ಯಪ್ರವೇಶಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ‘ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲು 2.5 ಲಕ್ಷ ಸೀರೆ ಅಗತ್ಯವಿದೆ. ಕೆಲವು ಜಿಲ್ಲೆಗಳಲ್ಲಿ ಈ ವರ್ಷ ಪ್ರಾಯೋಗಿಕವಾಗಿ ನೇಕಾರರಿಂದಲೇ ಸೀರೆ ಖರೀದಿ ಮಾಡಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.