ADVERTISEMENT

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 19:12 IST
Last Updated 13 ಡಿಸೆಂಬರ್ 2018, 19:12 IST
ಜಯಮಾಲ
ಜಯಮಾಲ   

ಬೆಳಗಾವಿ: ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ ವಿತರಣೆ ಮಾಡುವ ಚಿಂತನೆ ನಡೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲ ಹೇಳಿದರು.

ಗುರುವಾರ ವಿಧಾನ ಪರಿಷತ್‌ನಲ್ಲಿ ವೀಣಾ ಅಚ್ಚಯ್ಯ ಅವರು, ಹೊಲಿಗೆ ತರಬೇತಿ ಪಡೆದಿರುವ ಪ್ರವಾಹ ಸಂತ್ರಸ್ತರಿಗೆ ಶಾಲಾ ಸಮವಸ್ತ್ರ ಹೊಲಿಯುವ ಕೆಲಸ ನೀಡುವ ಮೂಲಕ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು ಎಂದು ಮಾಡಿದ ಮನವಿಗೆ ಸಚಿವರು ಉತ್ತರಿಸಿದರು.

ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಈಗಾಗಲೇ ಸಮವಸ್ತ್ರ ನೀಡಲಾಗುತ್ತಿದೆ. ಕಾನ್ವೆಂಟ್‌ಗಳಿಗೆ ತೆರಳುವ ಮಕ್ಕಳು ಹಾಕಿಕೊಂಡು ಹೋಗುವ ಸಮವಸ್ತ್ರ ನೋಡಿ ಅವರಿಗೂ ಒಳ್ಳೆಯ ಸಮವಸ್ತ್ರ ಧರಿಸಬೇಕು ಎನಿಸುತ್ತದೆ. ಮಕ್ಕಳಲ್ಲಿನ ಕೀಳರಿಮೆ ಹೋಗಲಾಡಿಸಲು ಹಾಗೂ ಶೈಕ್ಷಣಿಕ ದಾಖಲೆ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದರು.

ADVERTISEMENT

3ರಿಂದ 6 ವರ್ಷದೊಳಗಿನ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರದ ಜತೆಗೆ ಶೂ, ಸ್ವೆಟರ್‌ ನೀಡುವ ಚಿಂತನೆಯೂ ಇದ್ದು, ಹಣಕಾಸು ಇಲಾಖೆಯ ಮುಂದೆ ಪ್ರಸ್ತಾವ ಇದೆ. ಶೀಘ್ರದಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಶಾಲಾ ಸಮವಸ್ತ್ರ ಹೊಲಿಯುವ ಕೆಲಸವನ್ನು ಪ್ರವಾಹ ಸಂತ್ರಸ್ತರಿಗೆ ವಹಿಸುವ ಕುರಿತು ವಿವಿಧ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.