ADVERTISEMENT

ಅಡ್ಡಿಯಾಗದ ಶ್ರವಣದೋಷ: ಈಜಿಗೆ ’ಉತ್ತೇಜ’ನ

ಬ್ರೆಜಿಲ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಈಜು ಸ್ಪರ್ಧೆಗೆ ತಯಾರಿ

ಬಾಲಕೃಷ್ಣ ಪಿ.ಎಚ್‌
Published 4 ಡಿಸೆಂಬರ್ 2018, 13:41 IST
Last Updated 4 ಡಿಸೆಂಬರ್ 2018, 13:41 IST
ಜಾರ್ಖಂಡ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವ ಕೆ. ಉತ್ತೇಜ್‌
ಜಾರ್ಖಂಡ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವ ಕೆ. ಉತ್ತೇಜ್‌   

ದಾವಣಗೆರೆ: ಕಿವಿ ಕೇಳಿಸದಿರುವುದು, ಮಾತು ಬಾರದೇ ಇರುವುದು ಈತನ ಸಾಧನೆಗೆ ಅಡ್ಡಿಯಾಗಿಲ್ಲ. ಶ್ರವಣದೋಷವುಳ್ಳವರ ಮುಕ್ತ ಈಜು ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದಾನೆ.

ಇಲ್ಲಿನ ಡಿಸಿಎಂ ಟೌನ್‌ಶಿಪ್‌ನಲ್ಲಿರುವ ಮೌನೇಶ್ವರ ಶ್ರವಣದೋಷ ಮಕ್ಕಳ ವಸತಿಯುತ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಕೆ. ಉತ್ತೇಜ್‌ನ ಸಾಧನೆ ಇದು.

ಬಳ್ಳಾರಿಯ ಕೆ. ಶ್ರೀನಿವಾಸ್‌ ಮತ್ತು ಕೆ. ಲಕ್ಷ್ಮೀ ದಂಪತಿಯ ಮಗನಾದ ಈತ ಹುಟ್ಟಿ ಒಂದು ವರ್ಷ ಆಗಿದ್ದಾಗ ಟೈಫಾಯ್ಡ್‌ ಜ್ವರ ಅತಿಯಾಗಿ ಬಂದಿದ್ದರಿಂದ ಎರಡೂ ಕಿವಿಗಳು ಕೇಳಿಸದಾದವು. ಹಾಗಾಗಿ ಮಾತೂ ಬಾರದೆ ಹೋಯಿತು. ಮೈಸೂರಿನ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಸಂಸ್ಥೆಯಲ್ಲಿ ತರಬೇತಿ ಪಡೆಯಲು ತಾಯಿ ಮತ್ತು ಉತ್ತೇಜ್‌ ಹೋಗಿದ್ದರು. ಅಲ್ಲಿ ಬೈಕ್‌ನಲ್ಲಿ ಬಿದ್ದು ಉತ್ತೇಜ್‌ನ ಎಡಗಾಲಿನ ಮೂಳೆ ಮುರಿದಿದ್ದರಿಂದ ಬಳ್ಳಾರಿಗೆ ವಾಪಸ್ಸಾಗಬೇಕಾಯಿತು.

ADVERTISEMENT

ಬಳ್ಳಾರಿ ಶ್ರವಣದೋಷ ಮಕ್ಕಳ ಶಾಲೆಗೆ ಈತನನ್ನು ಹೆತ್ತವರು ಸೇರಿಸಿದರು. ಈಜುಗಾರ್ತಿ ಆಗಿರುವ ತಾಯಿ ಲಕ್ಷ್ಮೀ ಅವರೇ ಆರಂಭದಲ್ಲಿ ಈಜು ಕಲಿಸಿದರು. ಬಳ್ಳಾರಿಯಲ್ಲಿ ಈಜುಕೊಳ ಆರಂಭಗೊಂಡಾಗ ಅಲ್ಲಿಗೆ ಸೇರಿಸಿದರು. ಅಲ್ಲಿ ರಜನಿ ಲಕ್ಕ ಅವರು ಈಜು ತರಬೇತಿ ನೀಡಿದರು. ಜಿಲ್ಲಾಮಟ್ಟ, ರಾಜ್ಯಮಟ್ಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಉತ್ತೇಜ್‌ ತನ್ನ ಪ್ರತಿಭೆ ಸಾಬೀತುಪಡಿಸಿದ ಎಂದು ಆತನ ತಂದೆ ಕೆ. ಶ್ರೀನಿವಾಸ್ ತಿಳಿಸಿದರು.

8ನೇ ತರಗತಿಗೆ ದಾವಣಗೆರೆಯ ಮೌನೇಶ್ವರ ಶ್ರವಣದೋಷ ಮಕ್ಕಳ ವಸತಿಯುತ ಶಾಲೆಗೆ ಸೇರಿಸಿದರು. ಇಲ್ಲಿನ ‘ಗಾಂಜಿ ವೀರಪ್ಪ ಸ್ಮಾರಕ ಈಜುಕೊಳ’ದಲ್ಲಿ ಹನುಮಂತಪ್ಪ ಅವರು ಈಜು ತರಬೇತಿ ನೀಡಲಾರಂಭಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು 2017ರ ಆಗಸ್ಟ್‌ನಲ್ಲಿ ನಡೆಸಿದ ಈಜು ಸ್ಪರ್ಧೆಯಲ್ಲಿ ಬ್ಯಾಕ್‌ಸ್ಟ್ರೋಕ್‌, ಫ್ರೀಸ್ಟೈಲ್‌ ಮತ್ತು ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದು ಮಿಂಚಿದ. ಜಿಲ್ಲಾ ದಸರಾ ಈಜು ಸ್ಪರ್ಧೆಯಲ್ಲಿ ಈ ಮೂರು ವಿಭಾಗಗಳಲ್ಲಿಯೂ ದ್ವಿತೀಯ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾದ. ಚಿತ್ರದುರ್ಗ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ ವಿಭಾಗದಮಟ್ಟದ ಸ್ಪರ್ಧೆಯಲ್ಲಿಯೂ ದ್ವಿತೀಯ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ. ರಾಜ್ಯಮಟ್ಟದಲ್ಲಿಯೂ ಇದೇ ಸಾಧನೆಯನ್ನು ತೋರಿದ. ಅಚ್ಚರಿ ಅಂದರೆ ಈ ಎಲ್ಲ ಸ್ಪರ್ಧೆಗಳು ಶ್ರವಣದೋಷ ಉಳ್ಳ ಮಕ್ಕಳ ವಿಭಾಗವಲ್ಲ, ಎಲ್ಲರೊಂದಿಗೆ ನಡೆದ ಸ್ಪರ್ಧೆಯಾಗಿತ್ತು.

ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ 22ನೇ ರಾಷ್ಟ್ರಮಟ್ಟದ ಶ್ರವಣದೋಷವುಳ್ಳವರ ಮುಕ್ತ (ವಯಸ್ಸಿನ ಮಿತಿ ಇಲ್ಲ) ಈಜು ಸ್ಪರ್ಧೆಯಲ್ಲಿ 200 ಮೀಟರ್‌ ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ಅಂತರರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. 2019ರ ಆಗಸ್ಟ್‌ನಲ್ಲಿ ಬ್ರೆಜಿಲ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ನಡೆಯಲಿದೆ. ಅದಕ್ಕಾಗಿ ತಯಾರಿ ನಡೆಸುತ್ತಿದ್ದಾನೆ ಎಂದು ಮೌನೇಶ್ವರ ಶ್ರವಣದೋಷ ಮಕ್ಕಳ ವಸತಿಯುತ ಶಾಲೆಯ ಪ್ರಾಂಶುಪಾಲೆ ಪ್ರತಿಮಾದೇವಿ ಮತ್ತು ಶಿಕ್ಷಕ ಎ.ಡಿ. ಇಟಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಯಿಯ ಈಜು ಕುಟುಂಬ

ಉತ್ತೇಜ್‌ನ ಅಜ್ಜ ದಿವಂಗತ ಎಸ್‌.ಆರ್. ಲಿಂಗಪ್ಪ ಅವರು ಜೋಗದಲ್ಲಿ ಈಜು ತರಬೇತುದಾರರಾಗಿದ್ದರು. ತಾಯಿ ಲಕ್ಷ್ಮೀ ಅವರು ರಾಜ್ಯಮಟ್ಟದ ಈಜುಪಟು ಆಗಿದ್ದರು. ಈ ಹಿನ್ನೆಲೆ ಮತ್ತು ತಾಯಿಯ ಒತ್ತಾಸೆಯೇ ಉತ್ತೇಜ್‌ ಈಜುಪಟುವಾಗಲು ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.