ADVERTISEMENT

ಬಜೆಟ್‌ ಮುಂದಿನ 25 ವರ್ಷಗಳ ಪ್ರಗತಿಗೆ ದಿಕ್ಸೂಚಿಯಂತಿದೆ: ಸಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 13:54 IST
Last Updated 1 ಫೆಬ್ರುವರಿ 2022, 13:54 IST
ಸಿ.ಸಿ.ಪಾಟೀಲ
ಸಿ.ಸಿ.ಪಾಟೀಲ   

ಬೆಂಗಳೂರು: ‘ಕೇಂದ್ರ ಸರ್ಕಾರದ ಬಜೆಟ್‌ ನಮ್ಮ ರಾಷ್ಟ್ರಕ್ಕೆ ಮುಂದಿನ 25 ವರ್ಷಗಳ ಪ್ರಗತಿಗೆ ದಿಕ್ಸೂಚಿಯಂತಿದೆ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ.

‘ಕೋವಿಡ್‌ನಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಕೃಷಿ, ಮೂಲಸೌಕರ್ಯ, ನೀರಾವರಿ, ಕೈಗಾರಿಕೆ, ಸಾರಿಗೆ – ಸಂಪರ್ಕ ಈ ಮುಂತಾದ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿರುವುದು ಕೇಂದ್ರ ಸರ್ಕಾರದ ದಿಟ್ಟ ಹೆಜ್ಜೆ. ಆತ್ಮ ನಿರ್ಭರ ಭಾರತ ಅಂಗವಾಗಿ ಕೈಗೊಂಡ ಕ್ರಮಗಳು ಫಲಶ್ರುತಿ ನೀಡುವಲ್ಲಿ ಯಶಸ್ವಿಯಾಗುತ್ತಿವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಲ್ಲಿ ರಸ್ತೆ, ಹೆದ್ದಾರಿ, ವಿಮಾನ ನಿಲ್ದಾಣ, ಬಂದರು, ಜಲಸಾರಿಗೆ, ಭೂಸಾರಿಗೆ ಮತ್ತು ಸರಕು ಸಾಗಾಟದ ಸೌಲಭ್ಯಗಳಿಗೆ ಆದ್ಯತೆ ನೀಡಿರುವುದು ಭವಿಷ್ಯದಲ್ಲಿ ದೇಶದ ಸಂಪರ್ಕ ಕ್ರಾಂತಿಗೆ ಮುನ್ನುಡಿಯಾಗಲಿದೆ. ಇನ್ನೆರಡು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಜಾಲವನ್ನು ಇನ್ನಷ್ಟು ಅಂದರೆ 25 ಸಾವಿರ ಕಿ.ಮೀ. ಯಷ್ಟು ವಿಸ್ತರಿಸಲಾಗುವುದು ಮತ್ತು ಹೆದ್ಧಾರಿ –ಮೂಲಸೌಲಭ್ಯ ನಿರ್ಮಾಣಕ್ಕೆ ₹20 ಸಾವಿರ ಕೋಟಿ ಘೋಷಿಸಿರುವುದರಿಂದ ನಮ್ಮ ರಾಜ್ಯಕ್ಕೂ ವರದಾನವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನೀಡಲಾಗಿದ್ದ ನಮ್ಮ ಮನವಿಗೆ ಕೇಂದ್ರ ಭೂಸಾರಿಗೆ ಸಚಿವರು ಸ್ಪಂದಿಸಿ ಈಗಾಗಲೇ ಶಿರಾಡಿ ಘಾಟ್ ಹೆದ್ದಾರಿ ಉನ್ನತೀಕರಣಕ್ಕೆ ₹1,200 ಕೋಟಿಗಳನ್ನು ಮತ್ತು ಬಾನಾಪುರ –ಗದ್ದನಕೇರಿ ಹೆದ್ದಾರಿ ವಿಸ್ತರಣೆಗೆ ₹173 ಕೋಟಿ ಘೋಷಿಸಿರುವುದು ನಮ್ಮ ರಾಜ್ಯಕ್ಕೆ ಕೇಂದ್ರವು ನೀಡಿದ ವಿಶೇಷ ಕೊಡುಗೆಯಾಗಿದೆ’ ಎಂದು ಸಿ.ಸಿ.ಪಾಟೀಲರು ಪ್ರತಿಕ್ರಿಯಿಸಿದ್ದಾರೆ.

‘400 ಹೊಸ ರೈಲುಗಳ ಪ್ರಾರಂಭಕ್ಕೆ ನಿರ್ಧಾರ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ₹2.83 ಲಕ್ಷ ಕೋಟಿ ನಿಗದಿಪಡಿಸಿರುವುದು, ಕಾವೇರಿ-ಪೆನ್ನಾರ್- ಕೃಷ್ಣಾ ನದಿ ಜೋಡಣೆಗೆ ಸಮ್ಮತಿಸಿರುವುದು, ಅಂಗನವಾಡಿಗಳಿಗೆ ವಿಶೇಷ ಸೌಲಭ್ಯ ನೀಡಿ ಮೇಲ್ದರ್ಜೆಗೇರಿಸುವುದು, ಬೆಂಗಳೂರಿನ ನಿಮ್ಹಾನ್ಸ್ ಆಶ್ರಯದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆಗೆ ಮತ್ತಷ್ಟು ಹೆಚ್ಚಿನ ವ್ಯವಸ್ಥೆ ಕಲ್ಪಿಸುವುದು, ರಾಜ್ಯಗಳಿಗೆ ಮುಂದಿನ 50 ವರ್ಷ ಬಡ್ಡಿರಹಿತವಾಗಿ ₹1 ಲಕ್ಷ ಕೋಟಿ ಸಾಲ ನೀಡಲು ಮುಂದಾಗಿರುವುದು ... ಈ ಮುಂತಾದ ಅನೇಕ ಹೊಸ ನಿರ್ಧಾರಗಳಿಂದಾಗಿ ಇದೊಂದು ಜನಪರ ಬಜೆಟ್ ಆಗಿದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.