ADVERTISEMENT

ನದಿ ಜೋಡಣೆಯಿಂದ ತಮಿಳುನಾಡಿಗೆ ಲಾಭ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 19:31 IST
Last Updated 4 ಫೆಬ್ರುವರಿ 2022, 19:31 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಘೋಷಿಸಿರುವ ನದಿ ಜೋಡಣೆ ಯೋಜನೆಯಿಂದ ಕರ್ನಾಟಕಕ್ಕೆ ಲಾಭವಿಲ್ಲ. ತಮಿಳುನಾಡಿಗೆ ಹೆಚ್ಚಿನ ನೀರು ಹರಿದುಹೋಗಿ ರಾಜ್ಯವೇನಷ್ಟವೇ ಆಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ನಿರ್ಮಲಾ ಸೀತಾರಾಮನ್‌ ತಮಿಳುನಾಡಿನವರಾದ ಕಾರಣ ಈ ಯೋಜನೆ ಘೋಷಿಸಿದ್ದಾರೆ. ನದಿ ಜೋಡಣೆ ಕುರಿತು ನಮ್ಮ ರಾಜ್ಯದ ಜತೆಗೆ ಈವರೆಗೆ ಚರ್ಚೆ ನಡೆಸಿಲ್ಲ. ಯೋಜನೆಯ ವ್ಯಾಪ್ತಿಯ ರಾಜ್ಯಗಳ ಜತೆಗೆ ಚರ್ಚೆಯನ್ನೇ ನಡೆಸದೆ ಯೋಜನೆ ಜಾರಿಗೆ ಮುಂದಾದರೆ ಜಲವಿವಾದ ಉದ್ಭವಿಸುತ್ತದೆ’ ಎಂದರು.

ಕೃಷ್ಣಾ, ಗೋದಾವರಿ, ಪೆನ್ನಾರ್‌ ಮತ್ತು ಕಾವೇರಿ ನದಿಗಳ ಜೋಡಣೆ ಪ್ರಸ್ತಾವವಿದೆ. ಇದರಿಂದ 347 ಟಿಎಂಸಿ ಅಡಿ ನೀರು ಬಳಕೆಗೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ತಮಿಳುನಾಡಿಗೆ ಹೆಚ್ಚಿನ ನೀರು ಹರಿದುಹೋಗಿ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ. ಯಾವ ನದಿಯಲ್ಲಿ ಎಷ್ಟು ನೀರು ಸಿಗುತ್ತದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರವು ರಾಜ್ಯಗಳ ಜತೆ ಹಂಚಿಕೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

‘ಕೇಂದ್ರ ಸರ್ಕಾರವು ಏಕಪಕ್ಷೀಯ ನಿರ್ಧಾರ ಮಾಡಿ, ಅದನ್ನು ರಾಜ್ಯಗಳ ಮೇಲೆ ಹೇರುತ್ತಿದೆ. ಈ ಪ್ರಯತ್ನವನ್ನು ನಾನು ಖಂಡಿಸುತ್ತೇನೆ. ಬಜೆಟ್‌ ಮಂಡನೆಯಾಗಿ ಮೂರು ದಿನಗಳಾದರೂ ರಾಜ್ಯದ ಸಂಸದರು, ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿ ಈ ಕುರಿತು ತುಟಿ ಬಿಚ್ಚಿಲ್ಲ. ಇವರು ರಾಜ್ಯದ ಹಿತವನ್ನು ರಕ್ಷಣೆ ಮಾಡುತ್ತಾರಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಹಿಮಾಲಯದಲ್ಲಿ ಹುಟ್ಟುವ ನದಿಗಳನ್ನು ದಕ್ಷಿಣದ ನದಿಗಳಿಗೆ ಜೋಡಿಸುವ ಪ್ರಸ್ತಾವ ಹಿಂದೆಯೇ ಚರ್ಚೆಯಾಗಿತ್ತು. ಆರ್ಥರ್‌ ಕಾಟನ್‌ ಎಂಬ ಎಂಜಿನಿಯರ್‌ ಈ ಶಿಫಾರಸು ಮಾಡಿದ್ದರು. 1978ರಲ್ಲಿ ಮೊರಾರ್ಜಿ ದೇಸಾಯಿ ಅವರು ಗಂಗಾ– ಕಾವೇರಿ ಜೋಡಣೆ ಮಾಡುವುದಾಗಿ ಘೋಷಿಸಿದ್ದರು. ಅಟಲ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ನದಿ ಜೋಡಣೆ ಕುರಿತು ಹೇಳಿದ್ದರು. ಈಗ ಮತ್ತೆ ಅದೇ ಸುಳ್ಳನ್ನು ಹೇಳುತ್ತಿದ್ದಾರೆ ಎಂದರು.

ರಾಜಕೀಯ ಲಾಭ– ನಷ್ಟದ ಲೆಕ್ಕಾಚಾರ ಹಾಕಿ ಯಾವುದೇ ಯೋಜನೆ ಜಾರಿಗೆ ಸರ್ಕಾರ ಪ್ರಯತ್ನಿಸಬಾರದು. ಹಾಗೆ ಮಾಡಿದಾಗ ವಿವಾದಗಳು ಸೃಷ್ಟಿಯಾಗುತ್ತವೆ. ನದಿ ಜೋಡಣೆಗೆ ಆಸಕ್ತಿ ತೋರಿರುವ ನಿರ್ಮಲಾ ಸೀತಾರಾಮನ್‌ ಮೇಕೆದಾಟು ಯೋಜನೆಗೂ ಒಲವು ತೋರಿಸಲಿ. ಮಲತಾಯಿ ಧೋರಣೆ ಅನುಸರಿಸುವುದೇಕೆ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.