ADVERTISEMENT

ಕನ್ನಡದಲ್ಲೇ ಟೈಪಿಸಿ ಪಿಎಚ್‌.ಡಿ ಪಡೆದ ಅಂಧ

ಮೈಸೂರು ವಿಶ್ವವಿದ್ಯಾಲಯದ 99ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ

ನೇಸರ ಕಾಡನಕುಪ್ಪೆ
Published 17 ಮಾರ್ಚ್ 2019, 20:16 IST
Last Updated 17 ಮಾರ್ಚ್ 2019, 20:16 IST
ಪ್ರಮಾಣಪತ್ರದೊಂದಿಗೆ ಪಿ.ವಿ.ನಾಗರಾಜ್
ಪ್ರಮಾಣಪತ್ರದೊಂದಿಗೆ ಪಿ.ವಿ.ನಾಗರಾಜ್   

ಮೈಸೂರು: ಅಂಧರು ಪಿಎಚ್‌.ಡಿ ಪದವಿ ಪಡೆದಿರುವ ಉದಾಹರಣೆಗಳು ಸಾಕಷ್ಟು ಇವೆ. ಆದರೆ, ಪಿಎಚ್‌.ಡಿ ಪ್ರೌಢ ಪ್ರಬಂಧವನ್ನು ಯಾರೊಬ್ಬರ ಸಹಾಯವಿಲ್ಲದೇ ಸಂಪೂರ್ಣವಾಗಿ ಕಂಪ್ಯೂಟರಿನಲ್ಲೇ ಬೆರಳಚ್ಚು (ಟೈಪ್) ಮಾಡಿ ಇಲ್ಲೊಬ್ಬ ಅಂಧರು ಸಾಧನೆ ಮಾಡಿದ್ದಾರೆ. ಏಕಾಂಗಿಯಾಗಿ ಸಂಶೋಧನೆ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ 99ನೇ ಘಟಿಕೋತ್ಸವದಲ್ಲಿ ಕನ್ನಡ ಅಧ್ಯಯನ ವಿಭಾಗದಲ್ಲಿ ಭಾನುವಾರ ಪಿಎಚ್‌.ಡಿ ಪದವಿ ಸ್ವೀಕರಿಸಿದ ಪಿ.ವಿ.ನಾಗರಾಜ್ ಅವರ ಮೊಗದಲ್ಲಿ ಸಾಧನೆಯ ಕಾಂತಿಯಿತ್ತು. 4 ವರ್ಷ 9 ತಿಂಗಳಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್‌ ಪದವಿ ಪಡೆದುಕೊಂಡ ಹೆಮ್ಮೆಯಿತ್ತು. ‘ನಾನು ಅಂಧನೆಂದು ಯಾರೂ ನಿರುತ್ಸಾಹಗೊಳಿಸಲಿಲ್ಲ. ಯಾರೊಬ್ಬರ ಆಸರೆಯಲ್ಲೂ ಸಂಶೋಧನೆ ಮಾಡಲಿಲ್ಲ. ಸಂಪೂರ್ಣ ಸ್ವಾವಲಂಬಿಯಾಗಿ ಈ ಪದವಿ ಪಡೆದಿದ್ದೇನೆ’ ಎಂದು ಹೆಮ್ಮೆಯಿಂದ ನೆನಪಿಸಿಕೊಂಡರು.

ಸಾಧನೆ ಹೇಗೆ?: ಅಂಧರಿಗಾಗಿಯೇ ರೂಪಿಸಿರುವ ‘ಇ–ಸ್ಪೀಕ್‌’ ತಂತ್ರಾಂಶದಿಂದ ಕನ್ನಡ ಯೂನಿಕೋಡ್‌ನಲ್ಲಿರುವ ಪಠ್ಯವನ್ನು ಓದುತ್ತಾರೆ. ನಾನ್‌ ವಿಷುಯಲ್‌ ಡೆಸ್ಕ್‌ಟಾಪ್ ಆ್ಯಕ್ಸೆಸ್ (ಎನ್‌ವಿಡಿಎ) ಎಂಬ ತಂತ್ರಾಂಶದಿಂದ ಬರೆಯುತ್ತಾರೆ. ಇದಕ್ಕಾಗಿ ಇವರಿಗೆ ಪ್ರತ್ಯೇಕವಾದ ಕಂಪ್ಯೂಟರ್‌ ಕೀಬೋರ್ಡ್‌ ಬೇಕಿಲ್ಲ. ಕೀಬೋರ್ಡ್‌ನಲ್ಲಿ ಕೀಲಿಯನ್ನು ಒತ್ತಿದೊಡನೇ ಆ ಅಕ್ಷರದ ಶಬ್ದ ಸ್ಪೀಕರ್‌ನಿಂದ ಹೊರಹೊಮ್ಮುತ್ತದೆ. ಅದನ್ನು ಕೇಳಿಸಿಕೊಂಡು ಟೈಪ್‌ ಮಾಡುತ್ತಾರೆ.

ADVERTISEMENT

‘ಈ ತಂತ್ರಾಂಶಗಳನ್ನು ಬಳಸಿಕೊಂಡು ಅಕ್ಷರ ದೀಪ ಎಂಬ ಕೃತಿ ಪ್ರಕಟಿಸಿದ್ದೆ. ಇದೀಗ ಪಿಎಚ್‌.ಡಿ ಪದವಿಯನ್ನೂ ಪಡೆದಿರುವೆ’ ಎಂದು ನಾಗರಾಜ್ ‘ಪ್ರಜಾವಾಣಿ’ಗೆ ಹೇಳಿದರು.

‘ಕನ್ನಡ ಚಲನಚಿತ್ರ ಗೀತೆಗಳಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕ’ ಇವರ ಪಿಎಚ್‌.ಡಿ ವಿಷಯ. ಮಹಾರಾಜ ಕಾಲೇಜು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಬಿ.ಪಿ.ಆಶಾಕುಮಾರಿ ಮಾರ್ಗದರ್ಶಕರು. ಇದೇ ಕಾಲೇಜು ಇಂಗ್ಲಿಷ್‌ ಪ್ರಾಧ್ಯಾಪಕಿ ಅನಿತಾ ವಿಮಲಾ ಬ್ರಾಕ್ಸ್‌ ಇವರಿಗೆ ಆರ್ಥಿಕ, ನೈತಿಕವಾಗಿ ಬೆಂಬಲ ಕೊಟ್ಟವರು. ಕಂಪ್ಯೂಟರ್‌ನಲ್ಲಿ ಪರೀಕ್ಷೆ ಬರೆಯುವಂತೆ, ಪಿಎಚ್‌.ಡಿ ಬರೆಯುವಂತೆ ಬೆಂಬಲಿಸಿದವರು ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಪಂಡಿತಾರಾಧ್ಯ. ಹಂಪಿ ವಿ.ವಿ ಪ್ರಾಧ್ಯಾಪಕ ರಹಮತ್‌ ತರೀಕೆರೆ ಇವರಿಗೆ ವಿಷಯ ಆಯ್ಕೆ ಮಾಡಿಕೊಟ್ಟು, ಪೀಠಿಕೆ ರಚಿಸಲು ಸಹಾಯ ಮಾಡಿದ್ದಾರೆ.

ಮೊದಲಿಗರು: ಮೈಸೂರು ವಿ.ವಿ.ಯಲ್ಲಿ ಕನ್ನಡ ಸ್ನಾತಕೋತ್ತರ ಪರೀಕ್ಷೆಯನ್ನು ಕಂಪ್ಯೂಟರ್‌ನಲ್ಲಿ ಟೈಪಿಸಿ ಉತ್ತೀರ್ಣರಾದ ಮೊದಲಿಗರು. ವಿ.ವಿ.ಗೆ 3ನೇ ರ‍್ಯಾಂಕ್‌ ಪಡೆದ ಮೊದಲ ಅಂಧ ಇವರು. ಇದೀಗ ಸಂಶೋಧನಾ ಪ್ರೌಢ ಪ್ರಬಂಧವನ್ನು ಕಂಪ್ಯೂಟರಿನಲ್ಲಿ ಟೈಪ್‌ ಮಾಡಿ ಪಿಎಚ್‌.ಡಿ ಪದವಿ ಪಡೆದ ಮೊದಲಿಗರಾಗಿದ್ದಾರೆ. ಇವರ ಸಂಪರ್ಕ ಸಂಖ್ಯೆ ಮೊ: 9620169867.

‘ನೈಜೀರಿಯಾದಲ್ಲಿ ರೋಗ ಗುಣಪಡಿಸುವಾಸೆ’

‘ನನ್ನ ದೇಶ ತೀರಾ ಹಿಂದುಳಿದಿದೆ. ಕಾಯಿಲೆಗಳು ಸಾಕಷ್ಟಿವೆ. ಕೈಗಾರಿಕೆಗಳ ತ್ಯಾಜ್ಯ ದೇಶವನ್ನು ಹಾಳು ಮಾಡುತ್ತಿವೆ. ಇವೆಲ್ಲಕ್ಕೂ ರಸಾಯನ ವಿಜ್ಞಾನದ ಮೂಲಕ ಪರಿಹಾರ ಕಂಡುಹಿಡಿಯುವುದೇ ನನ್ನ ಜೀವನದ ಆಶಯ...’

–ಹೀಗೆ ಹೇಳಿದವರು, ಮೈಸೂರು ವಿಶ್ವವಿದ್ಯಾಲಯದ 99ನೇ ಘಟಿಕೋತ್ಸವದಲ್ಲಿ ರಸಾಯನ ವಿಜ್ಞಾನ ವಿಷಯದಲ್ಲಿ 20 ಚಿನ್ನದ ಪದಕ ಪಡೆದ ನೈಜೀರಿಯಾದ ವಿದ್ಯಾರ್ಥಿನಿ ಎಮಿಲೈಫ್ ಸ್ಟೆಲ್ಲಾ ಚಿನೆಲೊ. ಮೈಸೂರು ವಿ.ವಿ ಇತಿಹಾಸದಲ್ಲಿ ವಿದೇಶಿ ಪ್ರಜೆಯೊಬ್ಬರು 20 ಚಿನ್ನದ ಪದಕಗಳನ್ನು ‍ಪಡೆಯುತ್ತಿರುವುದು ಇದೇ ಮೊದಲು.

‘ನೈಜೀರಿಯಾದಲ್ಲಿ ಕ್ಯಾನ್ಸರ್‌ ಬಹುದೊಡ್ಡ ಪೀಡೆಯಾಗಿ ಪರಿಣಮಿಸಿದೆ. ಜತೆಗೆ, ಮಲೇರಿಯಾದಂತಹ ಮಾರಕ ಕಾಯಿಲೆಗಳೂ ಇವೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ನಾನು ಶ್ರಮಿಸುತ್ತೇನೆ. ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಸ್ವೀಕರಿಸಿ, ವಿಜ್ಞಾನಿಯಾಗಿ ಔಷಧ ಸಂಶೋಧನೆಗೆ ಆದ್ಯತೆ ನೀಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಅತ್ಯಧಿಕ ಅಂಕ

ಮೈಸೂರು ವಿ.ವಿ ಇತಿಹಾಸದಲ್ಲೇ ಅಂಧ ವಿದ್ಯಾರ್ಥಿನಿಯೊಬ್ಬರು ಅತ್ಯಧಿಕ ಅಂಕ ಗಳಿಸಿ ಮೊದಲಿಗರಾಗಿ ಸಂಭ್ರಮಿಸಿದ್ದಾರೆ. ರಾಜ್ಯಶಾಸ್ತ್ರ ವಿಭಾಗದ ತೇಜಶ್ರೀ ರಾಜಶೇಖರ ಮದ್ದಿನಮಠ್‌ ಶೇ 81.50 ಅಂಕ ಗಳಿಸಿದ್ದಾರೆ. ಅತ್ಯಧಿಕ ಅಂಕ ಗಳಿಸುವ ಅಂಧ ವಿದ್ಯಾರ್ಥಿನಿಗೆ ನೀಡುವ ಮೈಸೂರು ವಿ.ವಿ.ಯ ಉಷಾರಾಣಿ ನಾರಾಯಣ ನಾಗರತ್ನಾ ಸ್ಮಾರಕ ಚಿನ್ನದ ಪದಕ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.