ADVERTISEMENT

ಐಐಟಿ ಮಾದರಿಯಲ್ಲಿ ಯುವಿಸಿಇ: ಮಸೂದೆ ಮಂಡಿಸಿದ ಉನ್ನತ ಶಿಕ್ಷಣ ಸಚಿವ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 16:05 IST
Last Updated 16 ಡಿಸೆಂಬರ್ 2021, 16:05 IST
   

ಬೆಳಗಾವಿ (ಸುವರ್ಣ ವಿಧಾನಸೌಧ): ಬೆಂಗಳೂರಿನ ವಿಶ್ವವಿದ್ಯಾಲಯ ಎಂಜಿನಿಯರಿಂಗ್‌ ಕಾಲೇಜು (ಯುವಿಸಿಇ) ಅನ್ನು ಪುಣೆಯ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಮತ್ತು ಐಐಟಿ ಮಾದರಿಯಲ್ಲಿ ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸುವ ಉದ್ದೇಶದಿಂದ ವಿಧಾನಸಭೆಯಲ್ಲಿ ‘ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯ, ಮಸೂದೆ 2021’ ಅನ್ನು ಮಂಡಿಸಲಾಯಿತು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಮಸೂದೆಯನ್ನು ಮಂಡಿಸಿದರು.

ಎಂಜಿನಿಯರಿಂಗ್‌ ಹಾಗೂ ಸಂಬಂಧಿತ ಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕ ಉತ್ಕೃಷ್ಟ ಗುಣಮಟ್ಟಗಳನ್ನು ಹೊಂದಲು ಸಂಸ್ಥೆಯನ್ನು ಸಶಕ್ತಗೊಳಿಸುವ ಉದ್ದೇಶದಿಂದ ಸ್ವಾಯತ್ತತೆ ನೀಡಲು ಉದ್ದೇಶಿಸಲಾಗಿದೆ. ಅದಕ್ಕೆ ಪೂರಕವಾಗಿ ಸಂಸ್ಥೆಯ ಹೆಸರನ್ನು ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯ ಬದಲಿಸಲು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ.

ADVERTISEMENT

ಈ ಸಂಸ್ಥೆಯನ್ನು ರಾಷ್ಟ್ರ ಮಟ್ಟದ ಎಂಜಿನಿಯರಿಂಗ್‌ ಕಾಲೇಜುಗಳಲ್ಲೇ ಅಗ್ರಸ್ಥಾನಕ್ಕೆ ಮೇಲ್ದರ್ಜೆಗೇರಿಸಲು ಸರ್ಕಾರ ಎಸ್‌.ವಿ.ರಂಗನಾಥ್‌ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ, ವರದಿ ಪಡೆದ ಆಧಾರದಲ್ಲಿ ಮಸೂದೆ ರೂಪಿಸಲಾಗಿದೆ.

ಮಸೂದೆಯ ಪ್ರಮುಖ ಅಂಶಗಳು
*ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ, ಸಂಬಂಧಿತ ಕಲೆ, ವಿಜ್ಞಾನ (ಭೌತಿಕ, ಸಾಮಾಜಿಕ ಮತ್ತು ಜೀವವಿಜ್ಞಾನ), ಅಂತರ್‌ ಶಿಸ್ತೀಯ ಅಧ್ಯಯನಗಳ ಎಲ್ಲಾ ಕ್ಷೇತ್ರದಲ್ಲಿ ಮತ್ತು ವಿಶ್ವವಿದ್ಯಾಲಯದ ಪ್ರಮುಖ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು.
* ಈ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಜ್ಞಾನ ಹಾಗೂ ಆವಿಷ್ಕಾರಕ್ಕೆ ಉತ್ತೇಜನ ನೀಡಲು ಹಾಗೂ ಜಾಗತಿಕ ನಾಯಕತ್ವವನ್ನು ಕಲ್ಪಿಸಲು ಸಂಶೋಧನೆ, ಪ್ರಕಟಣೆ, ಸಮಾಲೋಚನೆ ಹಾಗೂ ಸಲಹಾತ್ಮಕ ಚಟುವಟಿಕೆಗಳನ್ನು ನಡೆಸುವುದು.
*ರಾಷ್ಟ್ರ ಮತ್ತು ಅಂತರರಾಷ್ಟ್ರೀಯವಾಗಿ ಉತ್ತಮ ಪ್ರತಿಭೆಯುಳ್ಳ ವಿದ್ಯಾರ್ಥಿಗಳನ್ನು ಮತ್ತು ವ್ಯಾಸಂಗ ವಿಭಾಗದವರನ್ನು(ಫ್ಯಾಕಲ್ಟಿ) ಸೆಳೆಯುವುದು.
* ಉದ್ಯಮ ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಮತ್ತು ಅಂತರರಾಷ್ಟ್ರೀಯವಾಗಿ ಸಹಯೋಗದ ಮೂಲಕ ಕಾರ್ಯಕ್ರಮಗಳನ್ನು ರೂಪಿಸುವುದು.
* ಆನ್‌ಲೈನ್‌ ಮತ್ತು ಡಿಜಿಟಲ್‌ ಶಿಕ್ಷಣಕ್ಕೆ ಒತ್ತು ನೀಡುವುದು.
* ಎಂಜಿನಿಯರಿಂಗ್‌, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಂಬಂಧಿತ ಅಧ್ಯಯನ ಕ್ಷೇತ್ರಗಳಿಗೆ ಕ್ಯಾಂಪಸ್‌ ಮತ್ತು ಕೇಂದ್ರಗಳನ್ನು ಸ್ಥಾಪಿಸುವುದು.
*ಕ್ರಿಯಾಶೀಲ ಜಾಗತಿಕ ಪದ್ಧತಿಗಳಿಗೆ ಸರಿ ಹೊಂದುವ ಆವಿಷ್ಕಾರ ಎಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಕಲೆ ರೂಪಿಸುವುದು.
*ನವನವೀನ ಮಾದರಿಯ ವಿದ್ಯಾರ್ಥಿ, ವ್ಯಾಸಂಗ ವಿಭಾಗ,ಪಾಲುದಾರ ಒಪ್ಪಂದವನ್ನು ರೂಪಿಸುವುದು ಮತ್ತು ಅವಶ್ಯಕವಾದಂತೆ ಮತ್ತು ಅವಶ್ಯಕವಾದ ನವನವೀನ ಜ್ಞಾನ ಕ್ಷೇತ್ರಗಳನ್ನು ಅನ್ವೇಷಿಸುವುದು.

ಶಿವಮೊಗ್ಗದಲ್ಲಿ ಆಯುಷ್‌ ವಿವಿ: ಮಸೂದೆ ಮಂಡನೆ
ಶಿವಮೊಗ್ಗದಲ್ಲಿ ಆಯುಷ್‌ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುವು ಮಾಡಿಕೊಡುವ ಕರ್ನಾಟಕ ರಾಜ್ಯ ಆಯುಷ್‌ ವಿಶ್ವವಿದ್ಯಾಲಯ ಮಸೂದೆ– 2021 ಅನ್ನು ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದರು.

ಶಿವಮೊಗ್ಗದ ಆಯುಷ್‌ ಕಾಲೇಜಿನಲ್ಲಿ ಇರುವ ಸೌಕರ್ಯಗಳನ್ನು ಬಳಸಿಕೊಳ್ಳುವುದರಿಂದ ₹20 ಕೋಟಿ ಅಂದಾಜು ವೆಚ್ಚ ಉಂಟಾಗುತ್ತದೆ ಹಾಗೂ ಈ ಹಂತದಲ್ಲಿ ಯಾವುದೇ ಹೆಚ್ಚಿನ ವೆಚ್ಚ ಉಂಟಾಗುವುದಿಲ್ಲ ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಸಾರ್ವಜನಿಕ ಆರೋಗ್ಯ, ಆಯುಷ್‌ ಉದ್ಯಮ, ವೈದ್ಯಕೀಯ ಸಸ್ಯ ಸಂಪನ್ಮೂಲದ ಅಭಿವೃದ್ಧಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರದ ಅಗತ್ಯಗಳನ್ನು ಪೂರೈಸುವುದಕ್ಕೆ ಶೈಕ್ಷಣಿಕ, ಸಂಶೋಧನೆ ಹಾಗೂ ತರಬೇತಿ ನೀಡಲು, ಆಯುಷ್‌ ಕ್ಷೇತ್ರದಲ್ಲಿ ಶ್ರೇಷ್ಠತೆಯ ವಿಶ್ವವಿದ್ಯಾಲಯವನ್ನಾಗಿ ಮಾಡುವ ಉದ್ದೇಶ ಇದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.