ADVERTISEMENT

ಮತ್ತೀಕೆರೆಯ ಮನೆಗೆ ಬಿಡಿ: ಅನಾಥ ಸ್ಥಿತಿಯಲ್ಲಿ ಸಿಕ್ಕಿದ್ದ ವಿನ್ಸೆಂಟ್‌ ಬಿನ್ನಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 20:01 IST
Last Updated 25 ಅಕ್ಟೋಬರ್ 2018, 20:01 IST
ಧಾರವಾಡದ ಜಿಲ್ಲಾ ಆಸ್ಪತ್ರೆಯ ನಿರಾಶ್ರಿತರ ಕೊಠಡಿಯಲ್ಲಿ ವಿನ್ಸೆಂಟ್ ಕ್ರಿಸ್ಟಿನ್‌ ಅವರು ತಮ್ಮಂತೆಯೇ ಇರುವ ಮಹಿಳೆಯರೊಂದಿಗೆ ಗುರುವಾರ ಗಹನ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು
ಧಾರವಾಡದ ಜಿಲ್ಲಾ ಆಸ್ಪತ್ರೆಯ ನಿರಾಶ್ರಿತರ ಕೊಠಡಿಯಲ್ಲಿ ವಿನ್ಸೆಂಟ್ ಕ್ರಿಸ್ಟಿನ್‌ ಅವರು ತಮ್ಮಂತೆಯೇ ಇರುವ ಮಹಿಳೆಯರೊಂದಿಗೆ ಗುರುವಾರ ಗಹನ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು   

ಧಾರವಾಡ: ನಗರದ ಹೊರವಲಯದ ಹೆದ್ದಾರಿಯಲ್ಲಿ ಇತ್ತೀಚೆಗೆ ಅನಾಥ ಸ್ಥಿತಿಯಲ್ಲಿ ಸಿಕ್ಕಿದ್ದ 76ರ ವರ್ಷದ ವಿನ್ಸೆಂಟ್ ಕ್ರಿಸ್ಟಿನ್ ಜಿಲ್ಲಾಸ್ಪತ್ರೆಯ ನಿರಾಶ್ರಿತರ ಕೊಠಡಿಯಲ್ಲಿ ಆಶ್ರಯ ಪಡೆದಿದ್ದಾರೆ.

ಪತ್ರಿಕೆಗಳಲ್ಲಿ ಬಂದ ವರದಿ ಆಧರಿಸಿ ಜನರು ಕುತೂಹಲದಿಂದ ಅವರನ್ನು ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ವಿನ್ಸೆಂಟ್ ಅವರ ಮಗ ಇಲ್ಲಿನ ಹೆದ್ದಾರಿಯಲ್ಲಿ ಬಿಟ್ಟುಹೋಗಿದ್ದಾನೆ ಎಂಬ ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಸುದ್ದಿ ಗುರುವಾರ ಮಾಧ್ಯಮಗಳಲ್ಲಿ ಪ್ರಕಟಗೊಂಡು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.

‘ಮನೆಯಿಂದ ಹೊರಬಿದ್ದು ಮೂರು ತಿಂಗಳಾಯಿತು. ಮನೆಯವರಿಗೆ ಧಾರವಾಡದಲ್ಲಿರುವ ಮಾಹಿತಿ ಇಲ್ಲ. ಬೆಂಗಳೂರಿನಲ್ಲೇ ಇದ್ದು, ಕಳೆದು ಹೋಗಿದ್ದೇನೆ ಎಂದು ಭಾವಿಸಿದ್ದಾರೆ. ಯಶವಂತಪುರದ ಮತ್ತೀಕೆರೆ ರಸ್ತೆಯಲ್ಲಿ ನಮ್ಮ ಮನೆ ಇದ್ದು ಅಲ್ಲಿಗೆ ನನ್ನನ್ನು ಕಳುಹಿಸಿಕೊಡಿ. ಎಲ್ಲರೂ ಸುಮ್ಮನೆ ಬಂದು ನನ್ನ ಮಾಹಿತಿ ಕೇಳಿ ಹೋಗಬೇಡಿ. ನನ್ನನ್ನು ಮನೆಗೆ ತಲುಪಿಸಿ. ಇಲ್ಲವೇ ಒಂದು ಸಣ್ಣ ಕೆಲಸವಾದರೂ ಕೊಡಿಸಿ’ ಎನ್ನುತ್ತಾರೆ ವಿನ್ಸೆಂಟ್‌.

ADVERTISEMENT

‘ಮೆಕ್ಯಾನಿಕ್ ಆಗಿದ್ದ ನಾನು ಯಶವಂತಪುರದಿಂದ ಹೊರಟಿದ್ದು ನೆನಪು. ನಂತರ ಮನೆಗೆ ಹೋಗಲಿಲ್ಲ. ಮಗ ಒಂದೆಡೆ ಇದ್ದಾನೆ. ಅವನ ಸಂಪರ್ಕ ನನಗಿಲ್ಲ. ನಾನು ಎಲ್ಲಿದ್ದೇನೆ ಎಂದು ಆತನಿಗೆ ಗೊತ್ತಿಲ್ಲ. ನನ್ನ ಮನೆಗೆ ತಲುಪಿದರೆ ಸಾಕು. ಇಲ್ಲವೇ ಹತ್ತಿರದ ಚರ್ಚ್‌ಗೆ ಸೇರಿಸಿ. ನಾನು ಕ್ಯಾಥೊಲಿಕ್‌. ಆದರೆ ಇಲ್ಲಿ ಪ್ರೊಟೆಸ್ಟಂಟ್ ಚರ್ಚ್ ಇದ್ದರೂ ಪರವಾಗಿಲ್ಲ. ನಾನು ಬದಲಾಗುತ್ತೇನೆ’ ಎಂದು ಅಂಗಲಾಚುತ್ತಿದ್ದ ದೃಶ್ಯ ಮನಕಲಕುವಂತಿತ್ತು.

‘ಮಗ ಸಾಮ್ಯುಯಲ್‌ ಕ್ರಿಸ್ಟಿನ್ ಕಂಪ್ಯೂಟರ್ ರಿಪೇರಿ ಕೆಲಸ ಮಾಡುತ್ತಾನೆ. ಮೂರು ತಿಂಗಳ ಹಿಂದೆ ಹೀಗೆ ಹೊರಗೆ ಹೋದಾಗ ನಾನು ಅವನು ಬೇರೆ ಬೇರೆ ಆದೆವು. ಇಬ್ಬರಿಗೂ ಪರಸ್ಪರ ಸಂಪರ್ಕವಿಲ್ಲದಂತಾಗಿದೆ. ಆತನ ಫೋನ್‌ ನಂಬರ್ ನನ್ನ ಬಳಿ ಇಲ್ಲ. ನಾನು ಆತನನ್ನು ಹುಡುಕುತ್ತಿದ್ದೇನೆ. ಆತನೂ ನನ್ನನ್ನು ಹುಡುಕುತ್ತಿರಬಹುದು’ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್ ಡಾ.ಗಿರಿಧರ ಕುಕನೂರ, ‘ವಿನ್ಸೆಂಟ್‌ ಅವರ ದೇಹದ ಆರೋಗ್ಯ ಚೆನ್ನಾಗಿದೆ. ಅವರು ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಮರೆವು ಕಾಯಿಲೆಯಿಂದ ಬಳಲುತ್ತಿರಬಹುದು. ವೈದ್ಯರು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಶುಕ್ರವಾರ ಸಂಪೂರ್ಣ ವರದಿಯೊಂದಿಗೆ ಪೊಲೀಸರಿಗೆ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.