ADVERTISEMENT

ಕೋವಿಡ್: ಪರಿಹಾರ ನಿರೀಕ್ಷೆಯಲ್ಲಿ ಅಸಂಘಟಿತ ಕಾರ್ಮಿಕರು

ಸಲ್ಲಿಕೆಯಾಗಿರುವ ಅರ್ಜಿ 14 ಲಕ್ಷಕ್ಕೂ ಹೆಚ್ಚು * ಪರಿಹಾರ ಪಡೆದವರು 2.14 ಲಕ್ಷ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 19:45 IST
Last Updated 30 ಆಗಸ್ಟ್ 2021, 19:45 IST
ಅಸಂಘಟಿತ ಕಾರ್ಮಿಕರು (ಸಾಂದರ್ಭಿಕ ಚಿತ್ರ)
ಅಸಂಘಟಿತ ಕಾರ್ಮಿಕರು (ಸಾಂದರ್ಭಿಕ ಚಿತ್ರ)   

ಹುಬ್ಬಳ್ಳಿ: ಅಸಂಘಟಿತ ವಲಯದ ಕಾರ್ಮಿಕರಿಗೆ ಕೋವಿಡ್‍ ಪರಿಹಾರವಾಗಿ ರಾಜ್ಯ ಸರ್ಕಾರ ಘೋಷಿಸಿದ್ದ ₹2,000 ನೆರವು 2,14,731 ಮಂದಿಗಷ್ಟೇ ತಲುಪಿದೆ. ಅಂದಾಜು 12 ಲಕ್ಷದಷ್ಟು ಕಾರ್ಮಿಕರು ಇನ್ನೂ ಪರಿಹಾರ ಮೊತ್ತದ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಅಧಿಕಾರಿಗಳ ಮಾಹಿತಿಯಂತೆ 14 ಲಕ್ಷಕ್ಕೂ ಹೆಚ್ಚು ಜನರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ.

‘ಈ ಹಿಂದೆಯೇ ನೋಂದಣಿಯಾಗಿದ್ದ 3.58 ಲಕ್ಷ ಕಾರ್ಮಿಕರಲ್ಲಿ 2,14,731 ಕಾರ್ಮಿಕರಿಗೆ ಪರಿಹಾರ ವಿತರಿಸಲಾಗಿದ್ದು, ಈಚೆಗೆ ನೋಂದಣಿಯಾದವರ ಅರ್ಜಿಗಳನ್ನು ಆಯಾ ಜಿಲ್ಲೆಯ ಕಾರ್ಮಿಕ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಪ್ರಕ್ರಿಯೆ ಮುಗಿದು, ಪರಿಹಾರ ಪಾವತಿಯಾಗುವಷ್ಟರಲ್ಲಿ ಮತ್ತೊಂದು ತಿಂಗಳು ಹಿಡಿಯಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬಿಪಿಎಲ್ ತೊಡಕು: ಬಿಪಿಎಲ್‍ ಕಾರ್ಡ್‌ ಹೊಂದಿರುವ ಕುಟುಂಬದ ಒಬ್ಬರಿಗೆ ಮಾತ್ರ ಪರಿಹಾರ ಎಂಬ ಮಾನದಂಡವಿದೆ. ಇದು ಮತ್ತಷ್ಟು ಕಾರ್ಮಿಕರನ್ನು ಪರಿಹಾರದ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಒಂದು ಕುಟುಂಬದಲ್ಲೇ ವಿವಿಧ ಕೆಲಸಗಳಲ್ಲಿ ತೊಡಗಿದವರು ಇರುತ್ತಾರೆ. ಒಬ್ಬರಿಗೆ ಪರಿಹಾರ ಸಿಕ್ಕರೆ, ಮತ್ತೊಬ್ಬರಿಗೆ ಇಲ್ಲವಾಗಿದೆ ಎನ್ನುತ್ತಾರೆ ಸಿಐಟಿಯುಮುಖಂಡ ಮಹೇಶ ಪತ್ತಾರ.

ನೋಂದಣಿ ಬಿಕ್ಕಟ್ಟು: ಕಾರ್ಮಿಕ ಕಾರ್ಡ್‍ಗಾಗಿ ನೋಂದಣಿ ಮಾಡಿಸಲು ಗುತ್ತಿಗೆ ಪಡೆದ ಕಂಪನಿ ಕೆಲವೇ ಮಂದಿಗೆ ಕಾರ್ಡ್‌ ನೀಡಿ, ಸುಮ್ಮನಾಗಿದೆ. ಇದರಿಂದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ನೋಂದಣಿ ಸಂಖ್ಯೆ ಇಲ್ಲದೆ, ಹಲವು ಕಾರ್ಮಿಕರಿಗೆ ತೊಂದರೆಯಾಯಿತು. ಕೆಲವರದು ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ ಎಂದೂ ತೋರಿಸಿತು.

ಈ ಎಲ್ಲ ಗೊಂದಲಗಳ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಸಮಸ್ಯೆಯನ್ನು ಪರಿಹರಿಸಿ, ಹಣ ಕೊಡಿಸುವ ಭರವಸೆ ನೀಡಿದ್ದಾರೆ. ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗುರುಸಿದ್ಧಪ್ಪ ಅಂಬಿಗೇರ ತಿಳಿಸಿದರು.

11 ವಲಯದವರಿಗಷ್ಟೇ ಪರಿಹಾರ
ಕ್ಷೌರಿಕ, ಗೃಹಕಾರ್ಮಿಕರು, ಅಕ್ಕಸಾಲಿಗರು, ಹಮಾಲರು, ಕಮ್ಮಾರರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಮೆಕ್ಯಾನಿಕ್‍, ಕುಂಬಾರರು, ಚಿಂದಿ ಆಯುವವರು, ಟೈಲರ್‌ಗಳು, ಅಗಸರನ್ನು ಮಾತ್ರ ಅಸಂಘಟಿತ ವಲಯದ ಕಾರ್ಮಿಕರೆಂದು ಗುರುತಿಸಿ, ಪರಿಹಾರ ನೀಡಲಾಗಿದೆ. ಆದರೆ, ಅಧಿಕಾರಿಗಳೇ ತಿಳಿಸುವಂತೆ 40ಕ್ಕೂ ಹೆಚ್ಚು ವರ್ಗಗಳು ಅಸಂಘಟಿತ ವಲಯದ ವ್ಯಾಪ್ತಿಗೆ ಬರುತ್ತವೆ. ಪಟ್ಟಿಯಲ್ಲಿ ಗುರುತಿಸಲಾಗದ ವರ್ಗಗಳಿಗೆ ಪರಿಹಾರ ಗಗನಕುಸುಮವಾಗಿದೆ ಎಂಬುದು ಕಾರ್ಮಿಕರ ಆರೋಪ.

*
ರಾಜ್ಯದಲ್ಲಿ 1.20 ಕೋಟಿ ಅಸಂಘಟಿತ ವಲಯದ ಕಾರ್ಮಿಕರಿದ್ದು, ಎಲ್ಲರಿಗೂ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು.
-ಮಹೇಶ ಪತ್ತಾರ, ಸಿಐಟಿಯು ಮುಖಂಡ

*
ಈ ಹಿಂದೆ ನೋಂದಣಿಯಾಗದವರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಕಾರಣ ಅವರಿಗೆ ಪರಿಹಾರ ವಿಳಂಬವಾಗಿದೆ. -ಮಲ್ಲಿಕಾರ್ಜುನ, ಕಾರ್ಮಿಕ ಅಧಿಕಾರಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.