ADVERTISEMENT

KSRTC: ಟಿಕೆಟ್‌ಗೆ ಪ್ರತಿದಿನ ಯುಪಿಐ ಬಳಸುತ್ತಿರುವ 20 ಸಾವಿರ ಪ್ರಯಾಣಿಕರು

ಬಾಲಕೃಷ್ಣ ಪಿ.ಎಚ್‌
Published 1 ಡಿಸೆಂಬರ್ 2024, 1:05 IST
Last Updated 1 ಡಿಸೆಂಬರ್ 2024, 1:05 IST
ಸ್ಮಾರ್ಟ್‌ ಇಟಿಎಂನೊಂದಿಗೆ ಕೆಎಸ್‌ಆರ್‌ಟಿಸಿ ನಿರ್ವಾಹಕ
ಸ್ಮಾರ್ಟ್‌ ಇಟಿಎಂನೊಂದಿಗೆ ಕೆಎಸ್‌ಆರ್‌ಟಿಸಿ ನಿರ್ವಾಹಕ   

ಬೆಂಗಳೂರು: ಯುಪಿಐ ಆಧಾರಿತ ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌ ಮಾಡಿ ಟಿಕೆಟ್‌ ದರ ಪಾವತಿಸುವ ತಂತ್ರಜ್ಞಾನ (ಸ್ಮಾರ್ಟ್‌ ಇಟಿಎಂ) ಅಳವಡಿಕೆಯು ಕೆಎಸ್‌ಆರ್‌ಟಿಸಿಯ ಎಲ್ಲ ಬಸ್‌ಗಳಲ್ಲಿ ಅನುಷ್ಠಾನಗೊಂಡಿದೆ. ಪ್ರತಿದಿನ 20 ಸಾವಿರ ಪ್ರಯಾಣಿಕರು ಯುಪಿಐ ಮೂಲಕ ಟಿಕೆಟ್‌ ದರ ಪಾವತಿಸುತ್ತಿದ್ದಾರೆ. 

ಆಂಡ್ರಾಯ್ಡ್ ತಂತ್ರಾಂಶ ಆಧಾರಿತ ಟಚ್ ಸ್ಕ್ರೀನ್, ವೈರ್‌ಲೆಸ್ ಸಂವಹನ ಮತ್ತು ವೇಗದ ಪ್ರಕ್ರಿಯೆ ವ್ಯವಸ್ಥೆಗಳಿರುವ ಈ ಸ್ಮಾರ್ಟ್‌ ಇಟಿಎಂಗಳನ್ನು ಪ್ರಾಯೋಗಿಕ ಹಂತವಾಗಿ ನ.6 ರಂದು ಕೆಎಸ್‌ಆರ್‌ಟಿಸಿ ಕೇಂದ್ರ ವಲಯದ ಐದು ಬಸ್‌ಗಳಿಗೆ ನೀಡಲಾಗಿತ್ತು. ಆ ಬಸ್‌ಗಳಲ್ಲಿ ಯಶಸ್ವಿಯಾದ ಬಳಿಕ ಉಳಿದ ಬಸ್‌ಗಳ ನಿರ್ವಾಹಕರಿಗೆ ಸ್ಮಾರ್ಟ್‌ ಇಟಿಎಂ ನೀಡುವ ಪ್ರಕ್ರಿಯೆ ನ.11ರಂದು ಆರಂಭವಾಗಿತ್ತು. ಒಂದು ವಾರದಲ್ಲಿ ಎಲ್ಲ ಬಸ್‌ಗಳ ನಿರ್ವಾಹಕರ ಕೈಗೆ ಸ್ಮಾರ್ಟ್‌ ಇಟಿಎಂ ಬಂದಿದೆ. ನ.18ರಿಂದ ಪೂರ್ಣ ಪ್ರಮಾಣದಲ್ಲಿ ಬಳಕೆ ಆರಂಭವಾಗಿದೆ.

ಡೈನಮಿಕ್‌ ಕ್ಯೂಆರ್‌ ಕೋಡ್‌ ಬಳಸಿ ಯುಪಿಐ ಆಧಾರಿತವಾಗಿ ಪಾವತಿ ಮಾಡಿ ಟಿಕೆಟ್‌ ಪಡೆಯುವವರಲ್ಲಿ ಸಾಮಾನ್ಯ ಬಸ್‌ಗಳ ಪ್ರಯಾಣಿಕರೇ ಹೆಚ್ಚಿದ್ದಾರೆ. ಪ್ರೀಮಿಯಂ ಬಸ್‌ಗಳಲ್ಲಿ ಮುಂಗಡವಾಗಿ ಕಾಯ್ದಿರಿಸಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿರುವುದು ಒಂದು ಕಾರಣವಾದರೆ, ಒಟ್ಟು ಬಸ್‌ಗಳಲ್ಲಿ ಪ್ರೀಮಿಯಂ ಬಸ್‌ಗಳ ಪ್ರಮಾಣ ಶೇ 10ರಷ್ಟು ಮಾತ್ರ ಇದ್ದು, ಎಕ್ಸ್‌ಪ್ರೆಸ್‌ ಮತ್ತು ಸಾಮಾನ್ಯ ಬಸ್‌ಗಳೇ ಅಧಿಕ ಇರುವುದು ಇದಕ್ಕೆ ಇನ್ನೊಂದು ಕಾರಣ.

ADVERTISEMENT

‘ಮೊದಲ ದಿನ ಫೋನ್‌ ಪೇ, ಗೂಗಲ್‌ ಪೇ ಇನ್ನಿತರ ಯುಪಿಐ ಆಧಾರಿತ ಆ್ಯಪ್‌ಗಳ ಮೂಲಕ ₹ 727 ಪಾವತಿಯಾಗಿತ್ತು. ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಾ ಹೋಗಿದ್ದು, ಈಗ ಕೆಎಸ್‌ಆರ್‌ಟಿಸಿಗೆ ಪ್ರತಿದಿನ ಸರಾಸರಿ ₹ 30 ಲಕ್ಷ ವರಮಾನ ಈ ತಂತ್ರಜ್ಞಾನದ ಮೂಲಕ ಬರುತ್ತಿದೆ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

‘10,245 ಸ್ಮಾರ್ಟ್‌ ಇಟಿಎಂಗಳಿದ್ದು, ಕೆಎಸ್‌ಆರ್‌ಟಿಸಿಯಲ್ಲಿ 8,941 ಬಸ್‌ಗಳು ಚಾಲನೆಯಲ್ಲಿವೆ. ದೂರದ ಊರಿಗೆ, ಬೇರೆ ರಾಜ್ಯಗಳಿಗೆ ಸಂಚರಿಸುವ ಕೆಲವು ಬಸ್‌ಗಳಲ್ಲಿ ಇಬ್ಬರು ನಿರ್ವಾಹಕರಾಗಿ ಕಾರ್ಯನಿರ್ವಹಿಸುವುದರಿಂದ ಇಬ್ಬರಿಗೂ ಸ್ಮಾರ್ಟ್‌ ಇಟಿಎಂ ನೀಡಲಾಗಿದೆ. ಯಾವುದಾದರೂ ಇಟಿಎಂ ಕೆಟ್ಟು ಹೋದರೆ ಬದಲಿಯಾಗಿ ನೀಡಲೆಂದು 500ರಷ್ಟು ಇಟಿಎಂಗಳನ್ನು ಕಾಯ್ದಿರಿಸಿಕೊಳ್ಳಲಾಗಿದೆ. ಉಳಿದ ಇಟಿಎಂಗಳನ್ನು ವಿತರಣೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಚಿಲ್ಲರೆ ಸಮಸ್ಯೆಗಾಗಿ ನಿರ್ವಾಹಕರು ಮತ್ತು ಪ್ರಯಾಣಿಕರ ಮಧ್ಯೆ ಆಗಾಗ ಉಂಟಾಗುತ್ತಿದ್ದ ಗೊಂದಲ, ಜಗಳಗಳಿಗೆ ಸ್ಮಾರ್ಟ್‌ ಇಟಿಎಂ ಕೊನೆಹಾಡಿದೆ. ಒಟ್ಟು ಪ್ರಯಾಣಿಕರಲ್ಲಿ ಶೇ 58ರಷ್ಟು ಮಹಿಳೆಯರು ಇರುವುದರಿಂದ ಅವರಿಗೆ ಉಚಿತ ಪ್ರಯಾಣವಿದೆ. ಶೇ 7ರಷ್ಟು ಪ್ರಯಾಣಿಕರು ವಿದ್ಯಾರ್ಥಿಗಳಾಗಿದ್ದು, ಅವರು ಪಾಸ್‌ ಪಡೆದು ಪ್ರಯಾಣಿಸುತ್ತಿದ್ದಾರೆ. ಇನ್ನೊಂದಷ್ಟು ಪ್ರಯಾಣಿಕರು ‘ಅವತಾರ್‌’ ಮೂಲಕ ಮೊದಲೇ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡುತ್ತಿದ್ದಾರೆ. ಇವರನ್ನು ಬಿಟ್ಟು, ಪುರುಷ ಪ್ರಯಾಣಿಕರು ಯುಪಿಐ ಆಧಾರಿತ ಪಾವತಿಯನ್ನು ಬಳಸಲು ಆರಂಭಿಸಿದ್ದಾರೆ. ದಿನ ಕಳೆದಂತೆ ಈ ತಂತ್ರಜ್ಞಾನ ಬಳಸುವವರ ಸಂಖ್ಯೆ ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋಟಿ ರೂಪಾಯಿ ದಾಟಲಿದೆ

ಟಿಕೆಟ್‌ ಆಧಾರಿತ ವರಮಾನದಲ್ಲಿ ಸ್ಕ್ಯಾನ್‌ ಮಾಡಿ ಪಾವತಿಯಾಗುವ ಮೊತ್ತವು ಕೆಲವು ದಿನಗಳಲ್ಲಿ ಪ್ರತಿನಿತ್ಯದ ಸಂಗ್ರಹ ಕೋಟಿ ರೂಪಾಯಿ ದಾಟಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂಗಡಿ ಹೋಟೆಲ್‌ಗಳಲ್ಲಿ ₹ 5 ₹ 10 ಮೊತ್ತವನ್ನು ಕೂಡ ಯುಪಿಐ ಆಧಾರಿತವಾಗಿ ಪಾವತಿಸುವುದು ಜನರಿಗೆ ಅಭ್ಯಾಸವಾಗಿ ಹೋಗಿದೆ. ಅದೇ ರೀತಿಯ ಪಾವತಿ ಬಸ್‌ಗಳಲ್ಲಿಯೂ ರೂಢಿಯಾಗಲಿದೆ. ಸ್ಮಾರ್ಟ್‌ ಇಟಿಎಂ ಇರುವುದರಿಂದ ಪ್ರಯಾಣಿಕರೂ ಜೇಬು ಅಥವಾ ಪರ್ಸ್‌ಗಳಲ್ಲಿ ಹಣ ಇಟ್ಟುಕೊಳ್ಳಬೇಕಿಲ್ಲ. ನಿರ್ವಾಹಕರಿಗೂ ಬ್ಯಾಗಲ್ಲಿ ಹಣ ಇಟ್ಟುಕೊಂಡು ಕಾಯುವ ಒತ್ತಡ ತಪ್ಪಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.