ADVERTISEMENT

UPSC | ಪ್ರಾದೇಶಿಕ ಭಾಷೆಗಳಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು: ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 14:15 IST
Last Updated 23 ಆಗಸ್ಟ್ 2025, 14:15 IST
ಎಚ್‌.ವಿಶ್ವನಾಥ್‌
ಎಚ್‌.ವಿಶ್ವನಾಥ್‌   

ಬೆಂಗಳೂರು: ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಬೇಕು. ಕೇಂದ್ರ ಲೋಕಸೇವಾ ಆಯೋಗ ಸೇರಿದಂತೆ ಎಲ್ಲ ಪರೀಕ್ಷಾ ಆಯೋಗ, ಪ್ರಾಧಿಕಾರಗಳು ಇಂಗ್ಲಿಷ್‌ ಕೈಬಿಟ್ಟು, ಪ್ರಾದೇಶಿಕ ಭಾಷೆಗಳಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿಯಮ ರೂಪಿಸಬೇಕು ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌ ಒತ್ತಾಯಿಸಿದ್ದಾರೆ.

ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಇಂಗ್ಲಿಷ್‌ ಒಂದು ವಿದೇಶಿ ಭಾಷೆ. ಸಂವಿಧಾನದ ಪ್ರಕಾರ ಭಾರತ ಸಾರ್ವಭೌಮ ರಾಷ್ಟ್ರ. ನೆಲ, ಜಲ, ಗಡಿಯ ವಿಚಾರದಲ್ಲಿ ಅದು ಸಾಬೀತಾಗಿದೆ. ಆದರೆ, ಆಡಳಿತ ಭಾಷೆಯ ವಿಚಾರದಲ್ಲಿ ಇಂಗ್ಲಿಷ್‌ ಅಗತ್ಯ ಏಕೆ ಎಂದು ಪ್ರಶ್ನಿಸಿದ್ದಾರೆ.

ದೇಶದ ಸಾಕ್ಷರತೆಯಲ್ಲಿ ಶೇ 10ರಷ್ಟು ಜನರು ಉನ್ನತ ಶಿಕ್ಷಣ ಪಡೆದಿಲ್ಲ. ಅದರಲ್ಲೂ ಪರಿಶಿಷ್ಟರು, ಹಿಂದುಳಿದ ವರ್ಗಗಳ ಸಾಕ್ಷರತೆ ಅತ್ಯಂತ ಕಡಿಮೆ ಇದೆ. ಐಎಎಸ್‌, ಕೆಎಎಸ್‌ನಂತಹ ‘ಎ’ ಮತ್ತು ‘ಬಿ’ ವೃಂದದ ಪರೀಕ್ಷೆಗಳಲ್ಲಿ ಕಡ್ಡಾಯ ಇಂಗ್ಲಿಷ್‌ ತೇರ್ಗಡೆಯಾಗದೆ ಇತರೆ ಪತ್ರಿಕೆಗಳ ಮೌಲ್ಯಮಾಪನವನ್ನೇ ಮಾಡುವುದಿಲ್ಲ. ಇದರಿಂದ ತಳ ಸಮುದಾಯದ ಜನರು ಉನ್ನತ ಅಧಿಕಾರಿಗಳಾಗಲು ಸಾಧ್ಯವಾಗುತ್ತಿಲ್ಲ. ಜನರಿಗೆ ಬೇಕಿರುವುದು ಸ್ಥಳೀಯ ಭಾಷೆಯ ಆಡಳಿತ. ಸಂವಹನಕ್ಕೆ ಇಂಗ್ಲಿಷ್‌ ಜ್ಞಾನ ಅಗತ್ಯ ಎನ್ನುವುದಾದರೆ, ಆಯ್ಕೆಯಾದ ನಂತರ ಅಧಿಕಾರಿಗಳಿಗೆ ತರಬೇತಿ ಜತೆಗೆ ಇಂಗ್ಲಿಷ್‌ ಕಲಿಸಬಹುದು ಎಂದು ಸಲಹೆ ನೀಡಿದ್ದಾರೆ.

ADVERTISEMENT

ನ್ಯಾಯಾಲಯಗಳ ಆದೇಶ, ಸಂಸತ್‌, ಆಡಳಿತ ವ್ಯವಹಾರ ಸೇರಿದಂತೆ ಎಲ್ಲವೂ ಆಯಾ ಅಧಿಕೃತ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾಗಬೇಕು. ಕರ್ನಾಟಕದಲ್ಲಿ ಮಾತೃಭಾಷೆಯನ್ನು ಪ್ರಥಮ ಭಾಷೆ ಎಂದು ಘೋಷಿಸುವ ಬದಲು, ರಾಜ್ಯ ಭಾಷೆ ಕನ್ನಡವೇ ಪ್ರಥಮ ಭಾಷೆ ಎಂದು ಘೋಷಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿನ ಇತರೆ ಭಾಷೆಗಳು, ಬೇರೆ ರಾಜ್ಯದವರ ಮಾತೃಭಾಷೆಗಳೂ ಪ್ರಥಮ ಭಾಷೆಯಾಗುವುದರಿಂದ ಕನ್ನಡಕ್ಕೆ ಹಿನ್ನಡೆಯಾಗುತ್ತದೆ. ದ್ವಿತೀಯ ಭಾಷೆಯಾಗಿ ಅವರವರ ಮಾತೃಭಾಷೆಗಳನ್ನು ನಿಗದಿ ಮಾಡಬೇಕು. ಹಿಂದಿ ದಿವಸ್‌ ರೀತಿ ಎಲ್ಲ ಪ್ರಾದೇಶಿಕ ಭಾಷೆಗಳ ದಿವಸ್‌ ಆಚರಿಸಬೇಕು. ಹೊರ ರಾಜ್ಯದ ಜನರಿಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಲು ಸರ್ಕಾರವೇ ಕಲಿಕಾ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.