ಬೆಂಗಳೂರು: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಸ್ಟ್‌ವರೆಗೆ ಪೂರೈಕೆ ಆಗಬೇಕಾದ ಯೂರಿಯಾ ರಸಗೊಬ್ಬರ ಪ್ರಮಾಣದಲ್ಲಿ 2.74 ಲಕ್ಷ ಟನ್ ಬಾಕಿಯಿದ್ದು, ಕೇಂದ್ರದಿಂದ ಪೂರೈಕೆಯಲ್ಲಿ ಆಗಿರುವ ಕೊರತೆಯಿಂದ ಸಮಸ್ಯೆಯಾಗಿದೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ರಸಗೊಬ್ಬರ ಕೊರತೆ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ‘ರೈತರನ್ನು ಬಿಜೆಪಿಯವರು ಪ್ರಚೋದಿಸಿ ರಾಜಕಾರಣ ಮಾಡಿದ್ದರಿಂದ ಸಮಸ್ಯೆ ಉಲ್ಬಣಿಸಿದೆ’ ಎಂದು ಆರೋಪಿಸಿದರು.
ಆಗ ಬಿಜೆಪಿ, ಜೆಡಿಎಸ್ ಸದಸ್ಯರು, ‘ಕೃಷಿ ಇಲಾಖೆಯ ಪೂರ್ವ ಸಿದ್ಧತೆ ಕೊರತೆ, ಜೊತೆಗೆ ನಿರ್ವಹಣೆಯಲ್ಲಿನ ವೈಫಲ್ಯದಿಂದ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ದೂರಿ ಸಭಾತ್ಯಾಗ ಮಾಡಿದರು.
ರಸಗೊಬ್ಬರ ಕೊರತೆ ಆಗದಂತೆ ಕೃಷಿ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ ಚಲುವರಾಯಸ್ವಾಮಿ, ‘ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ರಸಗೊಬ್ಬರ ಪೂರೈಕೆಗೆ ಒತ್ತಡ ಹೇರಿ, ನೆರವಾಗಬೇಕು’ ಎಂದೂ ಮನವಿ ಮಾಡಿದರು.
‘ಕೇಂದ್ರದಿಂದ ಹಂಚಿಕೆ ಆಗಿರುವಷ್ಟು ಯೂರಿಯಾ ಪೂರೈಕೆ ಆಗದಿದ್ದರೂ ಪರಿಸ್ಥಿತಿ ನಿಭಾಯಿಸಿದ್ದು, ರೈತರ ವಿಚಾರದಲ್ಲಿ ಸರ್ಕಾರ ಮೈಮರೆತಿಲ್ಲ’ ಎಂದು ಸಮರ್ಥನೆ ನೀಡಿದ ಚಲುವರಾಯಸ್ವಾಮಿ, ‘ಹಿಂದಿನ ಸರ್ಕಾರದ ಅವಧಿಯಲ್ಲೂ ಅಂತರರಾಜ್ಯ ರಸಗೊಬ್ಬರ ಕಳ್ಳಸಾಗಣೆ ಸಂಬಂಧ ಒಂಬತ್ತು ಪ್ರಕರಣ ದಾಖಲಾಗಿದ್ದವು. ನಮ್ಮ ಸರ್ಕಾರ ದಿನದ 24 ಗಂಟೆ ಗಡಿಗಳಲ್ಲಿ ನಿಗಾ ವಹಿಸಿದ್ದು, ಅನ್ಯ ರಾಜ್ಯಗಳಿಗೆ, ಉದ್ಯಮಗಳಿಗೆ ರಸಗೊಬ್ಬರ ಪೂರೈಕೆ ಆಗದಂತೆ ಮೇಲ್ವಿಚಾರಣೆ ನಡೆಸುತ್ತಿದೆ. ಅಕ್ರಮ ಸಾಗಣೆ ಆಗುತ್ತಿದ್ದ 450 ಟನ್ ರಸಗೊಬ್ಬರ ವಶಪಡಿಸಿಕೊಳ್ಳಲಾಗಿದೆ’ ಎಂದರು.
ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿಯ ಆರಗ ಜ್ಞಾನೇಂದ್ರ, ‘ಪೂರ್ವಸಿದ್ಧತೆ ಕೊರತೆಯಿಂದ ರಸಗೊಬ್ಬರ ಅಭಾವ ಸೃಷ್ಟಿಯಾಗಿದೆ. ಜತೆಗೆ, ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟದಿಂದಾಗಿ ಸಮಸ್ಯೆಯಾಗಿದೆ. ಅಂಥವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಕಳಪೆ ಬೀಜ, ಔಷಧ ವಿತರಣೆಯಿಂದಲೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಗಮನಸೆಳೆದರು.
ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ‘ಕೇಂದ್ರ ಸರ್ಕಾರ ರಾಜ್ಯಕ್ಕೆ ಆಗಸ್ಟ್ 11ರವರೆಗೆ 7.60 ಲಕ್ಷ ಟನ್ ರಸಗೊಬ್ಬರ ಪೂರೈಕೆಗೆ ಪ್ರತಿಯಾಗಿ 9.70 ಲಕ್ಷ ಟನ್ ಪೂರೈಸಿದೆ. ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆ ಪ್ರದೇಶದಲ್ಲಿ ರಸಗೊಬ್ಬರ ಕೊರತೆ ತೀವ್ರವಾಗಿದ್ದು, ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ’ ಎಂದು ದೂರಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ, ಶಾಸಕರಾದ ಬಿ.ವೈ. ವಿಜಯೇಂದ್ರ, ಸಿಮೆಂಟ್ ಮಂಜು, ಎಚ್.ಕೆ. ಸುರೇಶ್, ಎನ್.ಎಚ್. ಕೋನರಡ್ಡಿ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.