ADVERTISEMENT

ಶಾಲಾ ಮಕ್ಕಳಿಗೆ ಶೂ, ಬೈಸಿಕಲ್‌ ವಿತರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 15:50 IST
Last Updated 6 ಜುಲೈ 2022, 15:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರ ಆಯವ್ಯದಲ್ಲಿ ಅನುದಾನ ಮೀಸಲಿಡದ ಕಾರಣ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ 2022–23ನೇ ಸಾಲಿನಲ್ಲಿ ಬೈಸಿಕಲ್, ಶೂ ಮತ್ತು ಸಾಕ್ಸ್ ವಿತರಿಸಲು ಸಾಧ್ಯವಾಗದಿರುವುದು ವಿಷಾದನೀಯ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಖಂಡಿಸಿದೆ.

ಮಕ್ಕಳು ಗೌರವ ಮತ್ತು ಆತ್ಮಾಭಿಮಾನದಿಂದ ಸಮವಸ್ತ್ರ ಧರಿಸಿ, ಶೂ ಮತ್ತು ಸಾಕ್ಸ್ ಹಾಕಿಕೊಂಡು ಹೆಮ್ಮೆಯಿಂದ ಶಾಲೆಗೆ ಹೋಗುತ್ತಿದ್ದರು. ಕನ್ನಡ ಶಾಲೆಗಳ ಮಕ್ಕಳು ಉಳಿದ ಖಾಸಗಿ ಶಾಲೆಗಳ ಮಕ್ಕಳಂತೆಯೇ ಸ್ವಾಭಿಮಾನದ, ಗೌರವಯುತ ಕಲಿಕಾ ವಾತಾವರಣದಲ್ಲಿ ಕಲಿಯುವ ಭೂಮಿಕೆಯನ್ನು ಒದಗಿಸಲಾಗಿತ್ತು. ಅವರ ಹಕ್ಕನ್ನು ಕಸಿದಿರುವ ಸರ್ಕಾರ ಮಕ್ಕಳು ಬರಿಗಾಲಿನಲ್ಲಿ ಹೋಗುವಂತೆ ಮಾಡಿದೆ ಎಂದು ವೇದಿಕೆಯ ಮಹಾ ಪೋಷಕ ನಿರಂಜನಾರಾಧ್ಯ.ವಿ.ಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಮಕ್ಕಳ ಸಂವಿಧಾನಬದ್ಧ ಹಕ್ಕಿನ ಉಲ್ಲಂಘನೆ. ಮಕ್ಕಳ ಸ್ವಾಭಿಮಾನ, ಆತ್ಮಸ್ಥೈರ್ಯ ಕುಗ್ಗಿಸುವ ನಡೆ. ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಕೀಳಿರಿಮೆ ಹೆಚ್ಚಿಸಿ, ಶಿಕ್ಷಣದ ಆಸಕ್ತಿಯನ್ನು ತಗ್ಗಿಸುತ್ತದೆ. ಶಾಲೆಗಳು ಮತ್ತಷ್ಟು ದುರ್ಬಲವಾಗುತ್ತವೆ. ಸರ್ಕಾರ ತಕ್ಷಣ ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.