ADVERTISEMENT

ಉತ್ತರ ಕನ್ನಡ: ಹೊಳೆಯಾದ ರಾಷ್ಟ್ರೀಯ ಹೆದ್ದಾರಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 20:44 IST
Last Updated 31 ಆಗಸ್ಟ್ 2019, 20:44 IST
ಬಿರುಸಾದ ಮಳೆಯಿಂದ ಭಟ್ಕಳದಲ್ಲಿ ಶನಿವಾರ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ನೀರು ಹೊಳೆಯಂತೆ ಹರಿದು ವಾಹನ ಸಂಚಾರಕ್ಕೆ ಅಡಚಣೆಯಾಯಿತು
ಬಿರುಸಾದ ಮಳೆಯಿಂದ ಭಟ್ಕಳದಲ್ಲಿ ಶನಿವಾರ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ನೀರು ಹೊಳೆಯಂತೆ ಹರಿದು ವಾಹನ ಸಂಚಾರಕ್ಕೆ ಅಡಚಣೆಯಾಯಿತು   

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರವೂ ಬಿರುಸಾದ ಮಳೆಯಾಯಿತು. ಭಟ್ಕಳದಲ್ಲಿ ರಾತ್ರಿಯಿಂದಲೇ ಆಗಾಗ ಜೋರುಗಾಳಿಯೊಂದಿಗೆ ಧಾರಾಕಾರವಾಗಿ ಮಳೆಯಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಳೆಯಂತೆ ನೀರು ಹರಿಯಿತು. ಇದರ ಪರಿಣಾಮ ವಾಹನ ಸಂಚಾರಕ್ಕೆ ಭಾರಿ ಅಡಚಣೆಯಾಯಿತು.

ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ10ಕ್ಕೂ ಅಧಿಕಮನೆಗಳಿಗೆ ಹಾನಿಯಾಗಿದೆ. ವಿವಿಧ ಹಳ್ಳಗಳು, ನದಿಗಳು ತುಂಬಿ ಹರಿಯುತ್ತಿವೆ.ಹೊನ್ನಾವರ ತಾಲ್ಲೂಕಿನ ಗುಣವಂತೆ ಗ್ರಾಮದ ಹೊಟಾರ ಮಜರೆಯ ಕಾಲುಸೇತುವೆ ಶುಕ್ರವಾರ ಕೊಚ್ಚಿಕೊಂಡು ಹೋಗಿದೆ. ಗ್ರಾಮದ ಜನತಾ ವಿದ್ಯಾಲಯದ ಕಾಂಪೌಂಡ್ ಕುಸಿದಿದ್ದು, ಸಮೀಪದ ಮನೆಯೊಂದರ ಮೇಲೆ ಮರ ಬಿದ್ದಿದೆ.

ADVERTISEMENT

ಕೊಡಾಣಿ– ಬಾಳೆಮೆಟ್ಟು ನಡುವಿನ ರಸ್ತೆ ಬಿರುಕು ಬಿಟ್ಟಿದ್ದು, ಕುಸಿಯುವಸಾಧ್ಯತೆಯಿದೆ.ಕರಾವಳಿ ಹಾಗೂ ಮಲೆನಾಡಿನ ವಿವಿಧ ತಾಲ್ಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಜನಜೀವನದ ಮೇಲೆ ಪ್ರಭಾವ ಬೀರಿದೆ. ಹುಬ್ಬಳ್ಳಿ ನಗರದಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಕೊಡಗು ಜಿಲ್ಲೆಯ ವಿವಿಧೆಡೆ ಶನಿವಾರ ಧಾರಾಕಾರ ಮಳೆ
ಯಾಗಿದೆ. ಮಡಿಕೇರಿಯಲ್ಲಿ ಮಧ್ಯಾಹ್ನ ಅರ್ಧ ಗಂಟೆ ಜೋರು ಮಳೆ ಸುರಿಯಿತು. ತಲಕಾವೇರಿ, ಭಾಗಮಂಡಲ ಹಾಗೂ ನಾಪೋಕ್ಲು ವ್ಯಾಪ್ತಿಯಲ್ಲೂ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಶನಿವಾರ ಉತ್ತಮ ಮಳೆಯಾಗಿದೆ. ಆಗುಂಬೆ, ತೀರ್ಥಹಳ್ಳಿ, ಹೊಸನಗರ, ಮಾಸ್ತಿಕಟ್ಟೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಸಾಗರ, ಜೋಗ ಹಾಗೂ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ವಿವಿಧೆಡೆ ಶನಿವಾರ ಹದವಾದ ಮಳೆ ಸುರಿಯಿತು. ಚಿಂಚೋಳಿ, ಜೇವರ್ಗಿ, ಕಾಳಗಿ, ಸೇಡಂ ತಾಲ್ಲೂಕುಗಳ ವಿವಿಧೆಡೆ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಾಧಾರಣವಾಗಿ ಆರಂಭವಾದ ಮಳೆ ನಂತರ ಬಿರುಸು ಪಡೆಯಿತು.

ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪುರ ಹಾಗೂ ಗುರುಮಠಕಲ್‌ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.

ಕರಾವಳಿಯಲ್ಲಿ ಮಳೆ ಸಾಧ್ಯತೆ

ಬೆಂಗಳೂರು:‘ರಾಜ್ಯದ ಕರಾವಳಿ ಭಾಗದಲ್ಲಿ ಸೆಪ್ಟೆಂಬರ್‌ 5ರವರೆಗೆ ವ್ಯಾಪಕ ಮಳೆಯಾಗಲಿದೆ. ಹೀಗಾಗಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾನುವಾರದಿಂದ ಮುಂದಿನ ಐದು ದಿನಗಳವರೆಗೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಭಾಗದಲ್ಲಿ ಸಾಧಾರಣ ಮಳೆಯಾಗಲಿದ್ದು, ಈ ವಾರದ ಬಳಿಕ ಮಳೆ ಪ್ರಮಾಣ ಹೆಚ್ಚಾಗಲಿದೆ’ ಎಂದವರು ತಿಳಿಸಿದರು.

ಶನಿವಾರ ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 24 ಸೆಂ.ಮೀ. ಮಳೆಯಾಗಿದೆ. ಭಟ್ಕಳ 16, ಗೇರುಸೊಪ್ಪ 13, ಕಾರವಾರ 10, ಹೊನ್ನಾವರ 9, ಕೊಲ್ಲೂರು 8, ಕುಮಟಾ 7, ತಾಳಗುಪ್ಪದಲ್ಲಿ 6 ಸೆಂ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.