ADVERTISEMENT

ಉತ್ತರಾಖಂಡ ಪ್ರವಾಹ: 96 ಕನ್ನಡಿಗರು ಸುರಕ್ಷಿತ: ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 19:52 IST
Last Updated 21 ಅಕ್ಟೋಬರ್ 2021, 19:52 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಉತ್ತರಾಖಂಡ ಪ್ರವಾಸದಲ್ಲಿರುವ ರಾಜ್ಯದ 10 ಕುಟುಂಬಗಳ ಎಲ್ಲ 96 ಜನರೂ ಸುರಕ್ಷಿತರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಿಂದ ಅವರನ್ನು ರಕ್ಷಿಸಿ ಕರೆ ತರುವ ಪ್ರಯತ್ನ ನಡೆದಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು,‘ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಉತ್ತರಾಖಂಡ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದೆ. ರಾಜ್ಯದಿಂದ ಪ್ರವಾಸ ಕೈಗೊಂಡಿರುವವರ ವಿವರಗಳನ್ನು ಅವರಿಗೆ ನೀಡಿದ್ದೇವೆ’ ಎಂದು ತಿಳಿಸಿದರು.

ಈ ಉದ್ದೇಶಕ್ಕಾಗಿ ವಿಪತ್ತು ನಿರ್ವಹಣಾ ಇಲಾಖೆ ಸಹಾಯವಾಣಿಯನ್ನು ಸ್ಥಾಪಿಸಿದೆ. ಇದಕ್ಕೆ ಹಲವಾರು ಕರೆಗಳು ಬಂದಿವೆ. ಅಲ್ಲಿ ಸಿಲುಕಿರುವ ಎಲ್ಲರ ರಕ್ಷಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದರು.

ADVERTISEMENT

ಗಡಿಕೇಶ್ವಾರ ಭೂಕಂಪ: ‘ಕಲಬುರಗಿ ಜಿಲ್ಲೆಯ ಗಡಿಕೇಶ್ವಾರದಲ್ಲಿ ಸುಮಾರು 10 ವರ್ಷಗಳಿಂದಲೂ ಲಘು ಕಂಪನ ಆಗುತ್ತಿದೆ. ನಾನೇ ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿದ್ದೇನೆ. 30 ವರ್ಷಕ್ಕೂ ಹೆಚ್ಚು ಮನೆಗಳಿಗೆ ಹೋಗಿ ಸಮಸ್ಯೆ ಆಲಿಸಿದ್ದೇನೆ. ಎಲ್ಲರಿಗೂ ತಾತ್ಕಾಲಿಕ ಶೆಡ್‌ ವ್ಯವಸ್ಥೆ ಮಾಡಿದ್ದೇವೆ. ಸುಣ್ಣದ ಅಂಶ ಅಲ್ಲಿನ ಮಣ್ಣಿನಲ್ಲಿ ಹೆಚ್ಚಾಗಿರುವುದರಿಂದ ಹೆಚ್ಚು ಮಳೆ ಆದಾಗ ಈ ಸಮಸ್ಯೆ ಆಗುತ್ತದೆ’ ಎಂದು ಅಶೋಕ ತಿಳಿಸಿದರು.

‘ಇನ್ನು ಒಂದು ತಿಂಗಳ ಕಾಲ ವಿಜ್ಞಾನಿಗಳು ಸತತ ಸಂಶೋಧನೆ ಮಾಡಿ ಅಂತಿಮ ವರದಿ ನೀಡಲಿದ್ದಾರೆ. ಅಲ್ಲಿನ ಜಿಲ್ಲಾಡಳಿತದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಪರಿಹಾರ ಕಾರ್ಯಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಖಾತೆಗೆ ಸಾಕಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.