ADVERTISEMENT

ಅರ್ಹ ಬಡವರಿಗೆ ಮಾತ್ರ ವಸತಿ, ಅನರ್ಹರಿಗೆ ಮನೆ ಕೊಟ್ಟರೆ ಕ್ರಮ: ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 14 ಮೇ 2020, 20:15 IST
Last Updated 14 ಮೇ 2020, 20:15 IST
ವಿ. ಸೋಮಣ್ಣ
ವಿ. ಸೋಮಣ್ಣ   

ಬೆಂಗಳೂರು: ‘ಅರ್ಹ ಬಡವರಿಗೆ ಮಾತ್ರ ಸರ್ಕಾರದವಸತಿ ಯೋಜನೆಗಳ ಫಲ ಸಿಗಬೇಕು. ಅನರ್ಹರಿಗೆ ಈ ಯೋಜನೆಯಡಿ ಮನೆ ಮಂಜೂರು ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಎಚ್ಚರಿಸಿದರು.

‘ಪ್ರಜಾವಾಣಿ’ ಗುರುವಾರ ಏರ್ಪಡಿಸಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ‘ಅನರ್ಹರಿಗೆ ಮನೆ ಮಂಜೂರು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅಗತ್ಯ ಕಾನೂನು ರೂಪಿಸಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ಟಿ.ನರಸೀಪುರದ ಮಂಜುನಾಥ್‌ ಕರೆ ಮಾಡಿ, ಒಬ್ಬ ಫಲಾನುಭವಿಗೆ ಎರಡೆರಡು ಮನೆ ಮಂಜೂರು ಮಾಡಿರುವ ವಿಚಾರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಅನೇಕ ಗ್ರಾಮಗಳಲ್ಲಿ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಮನೆ ಮಂಜೂರು ಮಾಡಿದ ಬಗ್ಗೆ ದೂರುಗಳು ಬಂದಿವೆ. ಗಂಡನಿಗೊಂದು ಮನೆ, ಹೆಂಡತಿಗೊಂದು ಮನೆ, ಉಪಪತ್ನಿಗೊಂದು ಮನೆ ನೀಡುವುದಕ್ಕೆ ನಾನು ಅವಕಾಶ ನೀಡುವುದಿಲ್ಲ’ ಎಂದರು.

ADVERTISEMENT

ಬೀದರ್‌ನ ಗೋರಕ್‌ನಾಥ್‌ ಕರೆಗೆ ಉತ್ತರಿಸಿದ ಸಚಿವರು, ‘ಬಡವರಿಗೆ ಸೂರು ಕಲ್ಪಿಸಲು ಬಳಸಬೇಕಾದ ಹಣವನ್ನು ಯಾರದೋ ಫಲಾನುಭವಿಗಳ ಹೆಸರಿನಲ್ಲಿ ಧನಿಕರು ತಮ್ಮ ಮನೆಗೆ ಕೊಟ್ಟಿಗೆ, ಹಂದಿಗೂಡು ಕಟ್ಟಿಸಲು ಇನ್ನು ಅವಕಾಶ ನೀಡಲಾರೆ’ ಎಂದರು.

ಕಂತು ಬಿಡುಗಡೆಗೆ ಲಂಚ: ವಸತಿ ಯೋಜನೆಗಳ ಅನುದಾನ ಕಂತು ಬಿಡುಗಡೆ ಮಾಡಲು ಅಧಿಕಾರಿಗಳು ಲಂಚಕ್ಕಾಗಿ ಪೀಡಿಸುತ್ತಿರುವುದು ಹಾಗೂ ವಿಳಂಬ ಮಾಡುತ್ತಿರುವ ಬಗ್ಗೆಯೂ ಫಲಾನುಭವಿಗಳು ದೂರಿದರು.

‘ಯಾವುದೇ ಅಧಿಕಾರಿ ಲಂಚಕ್ಕಾಗಿ ಪೀಡಿಸಿದರೆ ನನ್ನ ಗಮನಕ್ಕೆ ತನ್ನಿ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದರು.

10 ಲಕ್ಷ ಮನೆ

‘ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಬಡವರಿಗಾಗಿ 10 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ. ಇಲಾಖೆಯಲ್ಲಿ ಪೋಲಾಗುವ ಹಣವನ್ನು ಉಳಿಸುವುದರ ಜೊತೆ, ವಿವಿಧ ಮೂಲಗಳಿಂದ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸುವ ಪ್ರಯತ್ನ ನಡೆಸುತ್ತಿದ್ದೇವೆ’ ಎಂದು ಸೋಮಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.