ADVERTISEMENT

ಈ ಸೊಲ್ಲು 25 ವರ್ಷಗಳದ್ದು: ವಚನಾನಂದ ಸ್ವಾಮೀಜಿ

‘ಪ್ರಜಾವಾಣಿ ಫೇಸ್‌ಬುಕ್‌ ಲೈವ್ ಸಂವಾದ’ದಲ್ಲಿ ಪ್ರವರ್ಗ ‘2ಎ’ಗೆ ಪಂಚಮಸಾಲಿ ಸೇರ್ಪಡೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 19:02 IST
Last Updated 19 ಅಕ್ಟೋಬರ್ 2020, 19:02 IST
ವಚನಾನಂದ ಸ್ವಾಮೀಜಿ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ವಚನಾನಂದ ಸ್ವಾಮೀಜಿ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಲಿಂಗಾಯತ ಪಂಚಮಸಾಲಿ ಸಮುದಾಯದವರನ್ನು ಪ್ರವರ್ಗ ‘2ಎ’ಗೆ ಸೇರಿಸಬೇಕು ಎನ್ನುವ ಸೊಲ್ಲು ಈಗಿನದ್ದಲ್ಲ; ಇಪ್ಪತ್ತೈದು ವರ್ಷಗಳಷ್ಟು ಹಿಂದಿನದ್ದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

‘ಪ್ರಜಾವಾಣಿ’ ಆಯೋಜಿಸಿದ್ದ ಫೇಸ್‌ಬುಕ್‌ ಲೈವ್ ಸಂವಾದದಲ್ಲಿ ಸೋಮವಾರ ಅವರು ಮಾತನಾಡಿದರು. ವೀರಪ್ಪ ಮೊಯಿಲಿ ಅವರು 1994ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಸಲ ರಾಜ್ಯದಲ್ಲಿ ಪ್ರವರ್ಗ ‘2ಎ’ಗೆ ಹಾಗೂ ಕೇಂದ್ರದಲ್ಲಿ ಒಬಿಸಿಗೆ ಸೇರಿಸಬೇಕು ಎಂದು ಪಂಚಮಸಾಲಿ ಸಮುದಾಯದ ನಾಯಕರೆಲ್ಲ ಮನವಿ ಮಾಡಿದ್ದರು. ಅಂದಿನಿಂದ ರಾಜ್ಯಕ್ಕೆ ಯಾವ ಮುಖ್ಯಮಂತ್ರಿ ಬಂದರೂ ಈ ಕುರಿತು ಅಹವಾಲನ್ನು ಸಲ್ಲಿಸುತ್ತಲೇ ಬರಲಾಗಿದೆ ಎಂದು ಮಾಹಿತಿ ನೀಡಿದರು.

ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಜಾತಿ ಎಂಬ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂಬುದೇ ಇರಲಿಲ್ಲ. ಅದೇ ಸುಸಂದರ್ಭ ಎನ್ನುವುದನ್ನು ಅರಿತು ಆಗ ಸಮುದಾಯದ ನಾಯಕರಾದ ಬಿ.ಎಂ. ಹನುಮನಾಳ ಮುಂಚೂಣಿಯಲ್ಲಿ ನಿಂತು ರಾಜ್ಯದ ವಿವಿಧೆಡೆ ಸಮೀಕ್ಷೆ ನಡೆಸಿದರು. 85 ಲಕ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ಪಂಚಮಸಾಲಿಗಳು ಇದ್ದಾರೆಂದು ಸ್ಪಷ್ಟಪಡಿಸಿಕೊಂಡರು. 2009ರಲ್ಲಿ ಸಚಿವರಾಗಿದ್ದ, ಸಮುದಾಯದ ಮುಖಂಡರೇ ಆದ ಮುರುಗೇಶ ನಿರಾಣಿ ಅವರ ಒತ್ತಾಸೆಯಿಂದ ಸಾಮಾನ್ಯ ವರ್ಗದಿಂದ ‘3ಬಿ’ ಕೆಟಗರಿಗೆ ಸೇರಿಸಲಾಯಿತು. ಈಗ ‘2ಎ’ಗೆ ಸೇರಿಸಬೇಕು ಎಂದು ಆಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

‘ಪಂಚಮಸಾಲಿಗಳಲ್ಲಿ ರೈತರೇ ಹೆಚ್ಚು. ರೇಷ್ಮೆ ಪಂಚೆ ಉಟ್ಟು, ಛತ್ರಿಯ ನೆರಳಲ್ಲಿ ಓಡಾಡುತ್ತಿದ್ದ ರೈತರು ಈಗ ಇಲ್ಲ. ಛತ್ರಿ ಹರಿದುಹೋಗಿದೆ. ರೈತ ಬಿಸಿಲಲ್ಲಿ ಬೆವರುತ್ತಿದ್ದಾನೆ. ಹೀಗಾಗಿ ನಾವು ಶಿಕ್ಷಣ, ಉದ್ಯೋಗ ಎರಡರಲ್ಲೂ ಮೀಸಲಾತಿ ಬಯಸುತ್ತಿದ್ದೇವೆ’ ಎಂದು ಪ್ರತಿಪಾದಿಸಿದರು.

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ತಾವು ಅಷ್ಟೇ ಅಲ್ಲದೆ ಸಮುದಾಯದ ಎಲ್ಲ ಸ್ವಾಮೀಜಿಗಳು ಈ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಹೋರಾಡಬೇಕು. ಮೀಸಲಾತಿ ವಿಷಯದಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಯಬೇಕಿದೆ. ಅದಕ್ಕೆ ಪೂರ್ವಭಾವಿಯಾಗಿ ಸಮುದಾಯದ ರಾಜಕಾರಣಿಗಳು, ವೃತ್ತಿಪರರು, ನಾಯಕರು ಒಂದೆಡೆ ಕಲೆತು ರೂಪುರೇಷೆ ಸಿದ್ಧಪಡಿಸಬೇಕಿದೆ ಎಂದು ಹೇಳಿದರು.

ಜಾತಿಗಳು ಒಂದು ಪ್ರವರ್ಗದಿಂದ ಇನ್ನೊಂದಕ್ಕೆ ಆಗಾಗ ಬದಲಾವಣೆ ಆಗುವ ಪ್ರಕ್ರಿಯೆಯನ್ನು ವಚನಾನಂದ ಸ್ವಾಮೀಜಿ ‘ಚೇಂಜ್ ಈಸ್ ಪರ್ಮನೆಂಟ್’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.