ADVERTISEMENT

ವಾಲ್ಮೀಕಿ ನಿಗಮದ ಹಗರಣ: ಪ್ರಕರಣದ 2ನೇ ಆರೋಪಿ ಸತ್ಯನಾರಾಯಣ ವರ್ಮಾಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 23:58 IST
Last Updated 12 ಆಗಸ್ಟ್ 2025, 23:58 IST
   

ಬೆಂಗಳೂರು: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ₹95 ಕೋಟಿ ಮೊತ್ತವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ’ ಎಂಬ ಆರೋಪದ ಪ್ರಕರಣದಲ್ಲಿ ಎರಡನೇ ಆರೋಪಿ ಹೈದರಾಬಾದ್‌ನ ಸತ್ಯನಾರಾಯಣ ವರ್ಮಾಗೆ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಈ ಕುರಿತ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

‘ಅರ್ಜಿದಾರರು ₹2 ಲಕ್ಷ ಮೊತ್ತದ ಬಾಂಡ್‌ ಮತ್ತು ಇಷ್ಟೇ ಮೊತ್ತಕ್ಕೆ ಇಬ್ಬರ ವೈಯಕ್ತಿಕ ಭದ್ರತೆ ಒದಗಿಸಬೇಕು. ತಮ್ಮ ಪಾಸ್‌ಪೋರ್ಟ್‌ ಅನ್ನು ಕೋರ್ಟ್‌ಗೆ ಒಪ್ಪಿಸಬೇಕು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು’ ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಇ.ಡಿ ದಾಖಲಿಸಿಕೊಂಡಿರುವ ಈ ಪ್ರಕರಣದಲ್ಲಿ ಅರ್ಜಿದಾರ ಸತ್ಯನಾರಾಯಣ ವರ್ಮಾ ಪರ ಹೈಕೋರ್ಟ್‌ ವಕೀಲ ಕೆ.ಬಿ.ಮೋನೇಶ್‌ ಕುಮಾರ್ ವಾದ ಮಂಡಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.