ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣದ ಎರಡನೇ ಆರೋಪಿ ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ಅವರನ್ನು ಇದೇ 13ರಂದು ಜಾರಿ ನಿರ್ದೇಶನಾಲಯದ (ಇಡಿ) ಕಸ್ಟಡಿಗೆ ನೀಡುವಂತೆ ಎಸ್‌ಐಟಿಗೆ ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಜಾರಿ ನಿರ್ದೇಶನಾಲಯ ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಇ.ಡಿ ಪರ ಹಾಜರಾಗಿದ್ದ ಪಿ.ಪ್ರಸನ್ನ ಕುಮಾರ್, ‘ವರ್ಮಾ ವಿರುದ್ಧ ಇ.ಡಿ ನ್ಯಾಯಾಲಯ ಬಾಡಿ ವಾರಂಟ್ ಜಾರಿ ಮಾಡಿರುವುದು ಬಾಕಿ ಇರುವಾಗ ಅವರನ್ನು ಎಸ್‌ಐಟಿ ವಶಕ್ಕೆ ಒಪ್ಪಿಸಬೇಕು. ಇಂದೂ ವಿಶೇಷ ನ್ಯಾಯಾಲಯ ಬಾಡಿ ವಾರಂಟ್ ಜಾರಿ ಮಾಡಿದೆ. ಆದರೆ, ಈ ಮೊದಲಿನ ಬಾಡಿ ವಾರಂಟ್ ಆದೇಶವನ್ನು ಎಸ್‌ಐಟಿ ಉಲ್ಲಂಘಿಸಿದೆ’ ಎಂದು ಆಕ್ಷೇಪಿಸಿದರು.
ಎಸ್ಐಟಿ ಪರ ಹಾಜರಾಗಿದ್ದ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ‘ವರ್ಮಾ ಅವರೇ ಹಗರಣದ ಪ್ರಮುಖ ವ್ಯಕ್ತಿ. ಪ್ರಕರಣದಲ್ಲಿ ಈತನಕ ₹49 ಕೋಟಿ ಜಪ್ತಿ ಮಾಡಲಾಗಿದೆ. ಇನ್ನೂ ₹30 ಕೋಟಿಗೂ ಹೆಚ್ಚಿನ ಮೊತ್ತ ಜಪ್ತಿ ಮಾಡಬೇಕಿದೆ. ವರ್ಮಾ ಅವರ ಕಸ್ಟಡಿ ಅವಧಿಯು ಇದೇ 12ರಂದು ಮುಗಿಯುತ್ತದೆ. ನಂತರ ಇ.ಡಿ ವಶಕ್ಕೆ ತೆಗೆದುಕೊಳ್ಳಬಹುದು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಇ.ಡಿ ವಿಶೇಷ ನ್ಯಾಯಾಲಯ ಬಾಡಿ ವಾರಂಟ್ ಆದೇಶ ಹೊರಡಿಸಿರುವಾಗ ಪುನಃ ಪೊಲೀಸ್ ಕಸ್ಟಡಿ ಆದೇಶವನ್ನು ಹೇಗೆ ಮಾಡಲಾಗುತ್ತದೆ? ಎಸ್‌ಐಟಿ ಉದ್ದೇಶಪೂರ್ವಕವಾಗಿ (ಎಸ್ಐಟಿ) ವರ್ಮಾ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದೆ. ಇದೆಲ್ಲವೂ ಇ.ಡಿ ವಶದಿಂದ ತಪ್ಪಿಸಿಕೊಳ್ಳುವ ತಂತ್ರ’ ಎಂದು ಅಸಮಾಧಾನ ವ್ಯಕ್ತಪಡಿಸಿ ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮುಂದೂಡಿತು. ಸತ್ಯನಾರಾಯಣ ವರ್ಮಾ ವಿರುದ್ಧ ಜಾರಿ ನಿರ್ದೇಶನಾಲಯ ಇಸಿಐಆರ್ (ಎನ್‌ಫೋರ್ಸ್‌ಮೆಂಟ್ ಕೇಸ್ ಇನ್‌ಫಾರ್ಮೇಶನ್ ರಿಪೋರ್ಟ್) ದಾಖಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.