ADVERTISEMENT

ವಾಲ್ಮೀಕಿ ನಿಗಮ ಹಗರಣ: ಮುಂಬೈ ಮಹಿಳೆ ನಾಗೇಂದ್ರ ಪತ್ನಿ; ಹೈಕೋರ್ಟ್‌ಗೆ ಸಿಬಿಐ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 15:23 IST
Last Updated 22 ಜನವರಿ 2026, 15:23 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ರೂಪಾಯಿ ದುರ್ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಾಗ ಅಕ್ರಮ ಹಣ ವರ್ಗಾವಣೆಯ ಇನ್ನೆರಡು ಹಗರಣ ಬೆಳಕಿಗೆ ಬಂದಿದ್ದು ಅವುಗಳಲ್ಲಿ ಮುಂಬೈನ ಒಬ್ಬ ಮಹಿಳೆ ತನ್ನ ಗಂಡನ ಹೆಸರು ಬಿ.ನಾಗೇಂದ್ರ ಎಂದು ದಾಖಲೆಗಳಲ್ಲಿ ನಮೂದಿಸಿಕೊಂಡಿದ್ದಾರೆ’ ಎಂದು ಸಿಬಿಐ ಹೈಕೋರ್ಟ್‌ಗೆ ಅರುಹಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಪಿ.ಪ್ರಸನ್ನ ಕುಮಾರ್, ‘ವಾಲ್ಮೀಕಿ ಹಗರಣದ ತನಿಖೆ ನಡೆಸುವಾಗ ಮತ್ತೆರಡು ಹಗರಣ ಬೆಳಕಿಗೆ ಬಂದಿದ್ದು ಇವುಗಳನ್ನೂ ತನಿಖೆ ನಡೆಸಲು ಇದೇ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದಾಗ ಮುಂಬೈನ ಇಬ್ಬರು ಮಹಿಳೆಯರಿಗೆ ಹಣ ಅಕ್ರಮವಾಗಿ ತಲುಪಿರುವುದು ಪತ್ತೆಯಾಗಿದೆ’ ಎಂದರು.

ADVERTISEMENT

‘ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆ ಖಾತೆಯಿಂದ ನೆಕ್ಕಂಟಿ ನಾಗರಾಜ್‌ ಆಪ್ತರಿಗೆ ಒಟ್ಟು ₹ 2.17 ಕೋಟಿ ಸಂದಾಯವಾಗಿದೆ ಮತ್ತು ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‌ನ ಕೇಂದ್ರದಿಂದ ನೆಕ್ಕಂಟಿ ಅವರಿಗೆ ₹95 ಲಕ್ಷ ಪಾವತಿಯಾಗಿದೆ. ಈ ಹಣ ಮುಂಬೈ ಮಹಿಳೆಯರಿಗೆ ತಲುಪಿದ್ದು ಇಬ್ಬರೂ ಒಟ್ಟು ₹95 ಲಕ್ಷ ಮೊತ್ತದ ಬಂಗಾರ ಖರೀದಿಸಿದ್ದಾರೆ. ಅವರಲ್ಲಿನ ಒಬ್ಬ ಮಹಿಳೆ ತನ್ನ ಮನೆಯ ಬಾಡಿಗೆ ಕರಾರು ಪತ್ರದಲ್ಲಿ, ತಾನು ಬಿ.ನಾಗೇಂದ್ರ ಅವರ ಪತ್ನಿ ಎಂದು ಕಾಣಿಸಿಕೊಂಡಿದ್ದಾರೆ’ ಎಂದು ವಿವರಿಸಿದರು.

‘ಪ್ರತಿವಾದಿ ನಾಗೇಂದ್ರ ಮಾಜಿ ಸಚಿವರಾಗಿದ್ದು ಸರ್ಕಾರದ ಬೊಕ್ಕಸದ ಹಣವನ್ನು ಈ ರೀತಿಯಲ್ಲಿ ದುರ್ಬಳಕೆ ಮಾಡಿಕೊಂಡಿರುವುದು ನಿಜಕ್ಕೂ ದುರದೃಷ್ಟಕರ. ಗಮನಾರ್ಹ ಅಂಶವೆಂದರೆ ಈ ಪ್ರಕರಣ ಹೈಕೋರ್ಟ್‌ ಮೇಲ್ವಿಚಾರಣೆಯಲ್ಲಿ ನಡೆಯಬೇಕು ಎಂದು ಆದೇಶವಿದೆ. ಹೀಗಾಗಿ, ನೆಕ್ಕಂಟಿ ನಾಗರಾಜ್ ಅವರ ಕಸ್ಟೋಡಿಯಲ್ ವಿಚಾರಣೆ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು. ಅಂತೆಯೇ, ‘ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿದರು. 

ವಾದ ಆಲಿಸಿದ ನ್ಯಾಯಪೀಠ, ನಾಗೇಂದ್ರ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.