
ಮೈಸೂರು: ‘ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿರುವ ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ರಾಷ್ಟ್ರಪ್ರೇಮದ ಬಗ್ಗೆ ರಾಜಿ ಇಲ್ಲದ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಪ್ರಯುಕ್ತ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಲ್ಲಿನ ಬಿಇಎಂಎಲ್‌ನಲ್ಲಿ ವರ್ಚುಯಲ್ ಆಗಿ ಭಾಗವಹಿಸಿದ ನಂತರ ಅವರು ನೌಕರರನ್ನು ಉದ್ದೇಶಿಸಿ ಮಾತನಾಡಿದರು.
‘ಪ್ರಧಾನಿಯವರ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ನಾನು ಸಂತೋಷದಿಂದ ಭಾಗಿಯಾದೆ. ಒಂದೂವರೆ ಶತಮಾನ ಕಳೆದರೂ ಎಲ್ಲಾ ಭಾರತೀಯರ ಹೃನ್ಮನಗಳಲ್ಲಿ ಅಜರಾಮರವಾಗಿರುವ ವಂದೇ ಮಾತರಂ ಗೀತೆಗೆ ಗೌರವ ಸಮರ್ಪಣೆ ಮಾಡಲಾಯಿತು. ಆ ಗೀತೆಯು ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಹಿಸಿದ ಪಾತ್ರವನ್ನು ಎಲ್ಲರೂ ಸ್ಮರಿಸಬೇಕು’ ಎಂದರು.
‘ಪ್ರಾಂತ್ಯವಾರು ಛಿದ್ರವಾಗಿದ್ದ ಭಾರತವನ್ನು ಒಗ್ಗೂಡಿಸಿದ ವಂದೇ ಮಾತರಂ ಗೀತೆಯು 150 ವರ್ಷವಾದರೂ ಜನರ ಅಚ್ಚುಮೆಚ್ಚಿನ ಗೀತೆಯಾಗಿದೆ. ಇದನ್ನು ಕೇಳುತ್ತಿದ್ದರೆ ರೋಮಾಂಚನ ಆಗುತ್ತದೆ’ ಎಂದು ಹೇಳಿದರು.
‘ವರ್ಷಪೂರ್ತಿ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ ನೀಡಿದ್ದಾರೆ. ಯುವ ಜನರು ಈ ಮಹಾನ್ ಗೀತೆಯಲ್ಲಿರುವ ಆದರ್ಶಗಳನ್ನು ಮನನ ಮಾಡಿಕೊಂಡು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು’ ಎಂದರು.
ಸಚಿವರು ಬಿಇಎಂಎಲ್ ಘಟಕದ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು. ಶಾಸಕ ಜಿ.ಡಿ. ಹರೀಶ್ ಗೌಡ ಹಾಗೂ ಬಿಇಎಂಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.