ADVERTISEMENT

ಘಟಕ ಕಾಲೇಜು ಪ್ರಸ್ತಾವ ಕೈಬಿಡಬೇಕು: ವಿವಿಧ ಸಂಘಟನೆಗಳಿಂದ ಸಿ.ಎಂ, ಸಚಿವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 15:50 IST
Last Updated 3 ಜೂನ್ 2025, 15:50 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ರಾಂ ನಾರಾಯಣ್ ಚೆಲ್ಲಾರಾಂ (ಆರ್‌.ಸಿ) ಸರ್ಕಾರಿ ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜುಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜು ಆಗಿ ಪರಿವರ್ತಿಸಬಾರದು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಅವರಿಗೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿವೆ. 

‘ನಗರದ ಪಾರಂಪರಿಕವಾದ ಈ ಎರಡು ಕಾಲೇಜುಗಳಲ್ಲಿ ಶುಲ್ಕವು ತೀರಾ ಕಡಿಮೆ. ಪ್ರಸಕ್ತ ಸಾಲಿನಲ್ಲಿ (2025–26) ಆರ್‌.ಸಿ. ಕಾಲೇಜಿನಲ್ಲಿ ಪ್ರಥಮ ವರ್ಷ ಪದವಿಗೆ (ಬಿ.ಕಾಂ) ಬಿ.ಬಿ.ಎ (ಸಾಮಾನ್ಯ) ಬಿ.ಬಿ.ಎ (ಎವಿಯೇಷನ್‌) ಪ್ರವೇಶ ಶುಲ್ಕ ಗಂಡು ಮಕ್ಕಳಿಗೆ ₹6,489, ಹೆಣ್ಣುಮಕ್ಕಳಿಗೆ ₹ 5,502 ನಿಗದಿಪಡಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜು ಆಗಿ ಪರಿವರ್ತಿಸಿದರೆ ಶುಲ್ಕ ಭಾರಿ ಏರಿಕೆ ಆಗಲಿದೆ. ಇದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದ ಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ಕಷ್ಟ ಆಗಲಿದೆ’ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ADVERTISEMENT

‘ಮಲ್ಲೇಶ್ವರದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯ ಘಟಕ ಕಾಲೇಜಿನಲ್ಲಿ ಪ್ರಸಕ್ತ ವರ್ಷ ಬಿ.ಎ ಪದವಿ ಮೊದಲ ವರ್ಷಕ್ಕೆ ₹13,502, ಬಿ.ಕಾಂ (ಸಾಮಾನ್ಯ) ಪದವಿಗೆ ₹20,489, ಬಿಸಿಎ (ಸಾಮಾನ್ಯ) ₹31,721, ಬಿ..ಬಿಎ (ಸಾಮಾನ್ಯ) ₹ 25,369 ಶುಲ್ಕ ನೀಡಬೇಕಿದೆ. ಘಟಕ ಕಾಲೇಜು ಆಗಿ ಪರಿವರ್ತಿಸಿದರೆ ಶುಲ್ಕದಲ್ಲಿ ಹೆಚ್ಚಳ ಆಗುವುದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ’ ಎಂದು ರಾಜ್ಯ ದಲಿತ ಪದವೀಧರರ ಸಂಘ, ಸಮತಾ ಸೈನಿಕ ದಳ– ವಿದ್ಯಾರ್ಥಿ ಒಕ್ಕೂಟ, ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಗಳು ಹೇಳಿವೆ.

‘ವರ್ಗಾವಣೆಯಿಂದ ತಪ್ಪಿಸಿಕೊಳ್ಳಬಹುದು ಮತ್ತು ವಯೋ ನಿವೃತ್ತಿ 62 ವರ್ಷ ಆಗಲಿದೆ ಎಂಬ ಕಾರಣಕ್ಕೆ ಘಟಕ ಕಾಲೇಜು ಪರಿವರ್ತನೆಯ ಪ್ರಸ್ತಾವದ ಪರ 4–5 ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಅವರ ಬೇಡಿಕೆಗೆ ಸರ್ಕಾರ ಮಣಿದರೆ ಬಡ ವಿದ್ಯಾರ್ಥಿಗಳು ಕಡಿಮೆ ಶುಲ್ಕ ಪಾವತಿಸಿ ಉನ್ನತ ಶಿಕ್ಷಣ ಪಡೆಯಬಹುದಾದ ಅವಕಾಶದಿಂದ ವಂಚಿತರಾಗಲಿದ್ದಾರೆ. ಹೀಗಾಗಿ, ಸರ್ಕಾರ ಯಾವುದೇ ಕಾರಣಕ್ಕೂ ಈ ಎರಡು ಕಾಲೇಜುಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಪರಿವರ್ತಿಸಬಾರದು’ ಎಂದೂ ಸಂಘಟನೆಗಳು ಆಗ್ರಹಿಸಿವೆ.

ಸಿ.ಎಂಗೆ ಮಹದೇವಪ್ಪ ಪತ್ರ
ಬೆಂಗಳೂರು ನಗರದ ಸರ್ಕಾರಿ ಆರ್‌.ಸಿ. ಕಾಲೇಜು ಮತ್ತು ಸರ್ಕಾರಿ ಕಾಲೇಜುಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜು ಆಗಿ ಪರಿವರ್ತಿಸುವ ಪ್ರಸ್ತಾವದ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಎಚ್‌.ಸಿ. ಮಹದೇವಪ್ಪ ಪತ್ರ ಬರೆದಿದ್ದಾರೆ. ಈ ಪ್ರಸ್ತಾವವನ್ನು ಕೈಬಿಡಬೇಕೆಂದು ವಿವಿಧ ಸಂಘಟನೆಗಳು ಸಲ್ಲಿಸಿರುವ ಮನವಿಯನ್ನು ಪರಿಗಣಿಸಬೇಕು ಎಂದೂ ಅವರು ಪತ್ರದಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.