ADVERTISEMENT

ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಚಳವಳಿ: ವಾಟಾಳ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 13:11 IST
Last Updated 18 ಜನವರಿ 2019, 13:11 IST
ಶತಾಯುಷಿ ಪಾಟೀಲ ಪುಟ್ಟಪ್ಪ ಅವರಿಗೆ ಶುಕ್ರವಾರ ವಾಟಾಳ್‌ ನಾಗರಾಜ್‌ ಅವರು ಮೈಸೂರು ಪೇಟ ತೊಡಿಸಿ ಅಭಿನಂದಿಸಿದರು –ಪ್ರಜಾವಾಣಿ ಚಿತ್ರ
ಶತಾಯುಷಿ ಪಾಟೀಲ ಪುಟ್ಟಪ್ಪ ಅವರಿಗೆ ಶುಕ್ರವಾರ ವಾಟಾಳ್‌ ನಾಗರಾಜ್‌ ಅವರು ಮೈಸೂರು ಪೇಟ ತೊಡಿಸಿ ಅಭಿನಂದಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಉತ್ತರ ಕರ್ನಾಟಕ ನಿರ್ಲಕ್ಷ್ಯ ವಿರೋಧಿಸಿ ಹಾಗೂ ಅಭಿವೃದ್ಧಿಗೆ ಆಗ್ರಹಿಸಿ ಫೆಬ್ರುವರಿಯಿಂದ ರಾಜ್ಯದಾದ್ಯಂತ ಚಳವಳಿ ನಡೆಸುವುದಾಗಿ ಕನ್ನಡ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿದರು.

ಶತಾಯುಷಿ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರ ಮನೆಗೆ ಶುಕ್ರವಾರ ಭೇಟಿ ನೀಡಿ, ಅವರಿಗೆ ಮೈಸೂರು ಪೇಟ ತೊಡಿಸಿ ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಬೀದರ್‌ನಿಂದ ಆರಂಭವಾಗುವ ಚಳವಳಿಯು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯಲಿದೆ ಎಂದು ಹೇಳಿದರು.

ADVERTISEMENT

ಕರ್ನಾಟಕ ಎಂದರೆ ಕೇವಲ ಮೈಸೂರು, ಬೆಂಗಳೂರು ಎಂಬಂತಾಗಿದೆ. ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಆರೋಪಿಸಿದರು.

ಸಮಗ್ರ ಕರ್ನಾಟಕ ಎಂಬುದು ಕಡೆಗಣನೆಗೆ ಒಳಗಾಗಿದೆ. ಕಳೆದ 50 ವರ್ಷಗಳಿಂದಲೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಗಳು ನಡೆದಿಲ್ಲ. ಉತ್ತರ ಕರ್ನಾಟಕ ಭಾಗದ ಶಾಸಕರು, ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ಪರಿಣಾಮಕಾರಿಯಾಗಿ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ, ಸಚಿವರು ಹೆಲಿಕಾಫ್ಟರ್‌ಗಳಲ್ಲಿ ಸಂಚರಿಸುವುದನ್ನು ನಿಲ್ಲಿಸಬೇಕು. ರಸ್ತೆಯಲ್ಲಿ ಪ್ರಯಾಣಿಸಿದರೆ ಮಾತ್ರ ಇಲ್ಲಿನ ಸಮಸ್ಯೆಗಳು ಅರಿವಿಗೆ ಬರುತ್ತವೆ. ಆದ ಕಾರಣ ಇನ್ನು ಮುಂದೆ ಯಾವುದೇ ಸಚಿವರು ಹೆಲಿಕಾಫ್ಟರ್‌ನಲ್ಲಿ ಅಡ್ಡಾಡುವುದನ್ನು ನಿಲ್ಲಿಸಿ, ಕಾರಿನಲ್ಲಿ ಅಡ್ಡಾಡಬೇಕು ಎಂದು ಆಗ್ರಹಿಸಿದರು.

ಆಯೋಗ ಕ್ರಮಕೈಗೊಳ್ಳಲಿ:ಪಕ್ಷಾಂತರಿಗಳಿಗೆ ಆರು ವರ್ಷಗಳ ಕಾಲ ಮಾತ್ರವಲ್ಲ, ಜೀವನ ಪರ್ಯಂತ ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಹಾಗೂ ಪಕ್ಷಾಂತರಿಗಳಿಗೆ ಜೈಲು ಶಿಕ್ಷೆಯಾಗುವಂತೆ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಕ್ಷಾಂತರ, ಆಪರೇಷನ್‌ ಕಮಲ ಎಂಬುದು ರಾಜ್ಯದ ರಾಜಕೀಯಕ್ಕೆ ಅಗೌರವ. ಪಕ್ಷಾಂತರ ಮಾಡುವುದು ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ಅಪಮಾನ ಮಾಡಿದಂತೆ. ಹೀಗಾಗಿ ಪಕ್ಷಾಂತರಿಗಳ ವಿರುದ್ಧ ಜನರು ದಂಗೆ ಏಳಬೇಕು ಎಂದು ಕರೆ ನೀಡಿದರು.

ಭಾರತ ರತ್ನ ನೀಡಿ:ತುಮಕೂರು ಸಿದ್ಧಗಂಗಾಶ್ರೀಗಳಿಗೆ ಕೇಂದ್ರ ಸರ್ಕಾರ ‘ಭಾರತ ರತ್ನ’ ನೀಡಬೇಕು. ಈ ಸಂಬಂಧ ರಾಜ್ಯದ ಎಲ್ಲ ಸಂಸದರು ಪ್ರಧಾನಿ ಮೇಲೆ ಒತ್ತಡ ಹೇರಬೇಕು ಎಂದರು.

ಸಿದ್ಧರಂಗಾಶ್ರೀಗಳ ಜೊತೆಗೆ ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್‌, ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರಿಗೂ ‘ಭಾರತ ರತ್ನ’ ನೀಡಿ ಗೌರವಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಕಂಡ ಮಹಾನ್‌ ವ್ಯಕ್ತಿ ಪಾಟೀಲ ಪುಟ್ಟಪ್ಪ ಅವರಿಗೆ ‘ಕರ್ನಾಟಕ ರತ್ನ’ ನೀಡಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.