ADVERTISEMENT

ಯಡಿಯೂರಪ್ಪ ಕಂಪನಿ ಹೋಗದಿದ್ದರೆ ಒಳಿತಾಗದು: ವಾಟಾಳ್‌ ನಾಗರಾಜ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 10:44 IST
Last Updated 2 ಏಪ್ರಿಲ್ 2021, 10:44 IST
ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್   

ಚಿತ್ರದುರ್ಗ: ‘ರಾಜ್ಯದ ದಿಕ್ಕೇ ಬದಲಾಗಿದೆ. ಎತ್ತ ಸಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಭ್ರಷ್ಟರ ಕೂಟವಾಗಿದೆ. ರಾಜ್ಯಕ್ಕೆ ಒಳಿತಾಗಬೇಕಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಕಂಪನಿ ಹೋಗಬೇಕು’ ಎಂದು ವಾಟಾಳ್‌ ಪಕ್ಷದ ಮುಖಂಡ ವಾಟಾಳ್‌ ನಾಗರಾಜ್ ಹೇಳಿದರು.

ಇಲ್ಲಿನ ರಾಷ್ಟ್ರನಾಯಕ ಎಸ್‌.ಎನ್. ಸ್ಮಾರಕಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಎಲ್ಲಾ ಅಧಿಕಾರಿಗಳು ಮುಖ್ಯಮಂತ್ರಿ ಗುಲಾಮರಾಗಿದ್ದಾರೆ. ಸರ್ಕಾರವನ್ನು ಪ್ರಶ್ನಿಸುವವರಿಗೆ ಉಳಿಗಾಲವಿಲ್ಲ. ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಯಾರ ಮಾತನ್ನೂ ಕೇಳುವುದಿಲ್ಲ’ ಎಂದು ದೂರಿದರು.

‘ಮಾಧುಸ್ವಾಮಿ ಖಾತೆ ಕಿತ್ತುಕೊಂಡು ಮೂರ‌ನೇ ಸ್ಥಾನದ ಖಾತೆ ನೀಡಿ, ಕಡೆಗಣಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದಾಗಿ ಸಚಿವ ಕೆ.ಎಸ್. ಈಶ್ವರಪ್ಪ ಮಾಡುತ್ತಿರುವ ವಾದ ಸರಿಯಾಗಿದೆ. ಯಡಿಯೂರಪ್ಪ ಸರ್ಕಾರ ಲಿಮಿಟೆಡ್ ಕಂಪನಿ ಇದ್ದಂತೆ. ಇಲ್ಲಿ ಅರ್ಹರಿಗೆ ಅವಕಾಶ ಸಿಗದು. ಅದಕ್ಕಾಗಿ ಕೆಲವರು ತಿರುಗಿ ಬಿದ್ದಿದ್ದಾರೆ’ ಎಂದರು.

ADVERTISEMENT

‘ನಾನು ರಮೇಶ್‌ ಬಂಧಿಸುವ ಕುರಿತು ಪ್ರತಿಕ್ರಿಯಿಸಲಾರೆ. ರಾಜ್ಯದಲ್ಲಿ ತಲ್ಲಣ ಉಂಟು ಮಾಡಿರುವ ಸಿಡಿ ಪ್ರಕರಣ ದೇಶದ ರಾಜಕೀಯ ವಲಯದ ಮೇಲೂ ಪ್ರಭಾವ ಬೀರಿದೆ. ಈ ಸಂಬಂಧ ಉನ್ನತ ಮಟ್ಟದ ಸಮಗ್ರವಾದ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಪ್ರಾಮಾಣಿಕತೆ ಮಾಯವಾಗುತ್ತಿದೆ. ಪ್ರಸ್ತುತ ರಾಜಕಾರಣ ಹೊಲಸಾಗಿದೆ. ಸಂಪೂರ್ಣ ಹದಗೆಟ್ಟಿದ್ದು, ಮೂರು ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ಅದಕ್ಕಾಗಿ ಹೊಸದೊಂದು ಶಕ್ತಿ ಉದಯಿಸುವ ಅಗತ್ಯವಿದೆ. ಆದಷ್ಟೂ ಬೇಗ ವಿಧಾನಸಭಾ ಚುನಾವಣೆ ಬರಬೇಕು. ಪ್ರಾಮಾಣಿಕರು ಚುನಾಯಿತರಾಗಿ ಭ್ರಷ್ಟಾಚಾರರಹಿತ ಸರ್ಕಾರ ಅಧಿಕಾರಕ್ಕೆ ಬರಬೇಕು. ಈ ವಿಚಾರವಾಗಿ ಮತದಾರರು ಉತ್ತಮ ನಿರ್ಧಾರ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಮುಖ್ಯಮಂತ್ರಿ ಬೆಂಬಲಕ್ಕೆ ರಾಜ್ಯದ ಯಾವ ಮಠಾಧೀಶರು, ಯಾವೊಬ್ಬ ಸಚಿವರು, ಶಾಸಕರು ಬೆಂಬಲಕ್ಕೆ ನಿಲ್ಲಬಾರದು. ಹೊಸ ಆಡಳಿತದ ಅಲೆ ಆರಂಭವಾಗಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.