ADVERTISEMENT

ಜ.15ರಿಂದ ‘ವಿಬಿ–ಜಿರಾಮ್‌ಜಿ’ ಜಾಗೃತಿ ಅಭಿಯಾನ: ಎ.ಎಸ್. ಪಾಟೀಲ ನಡಹಳ್ಳಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 8:51 IST
Last Updated 12 ಜನವರಿ 2026, 8:51 IST
   

ದಾವಣಗೆರೆ: ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ (ವಿಬಿ–ಜಿರಾಮ್‌ಜಿ) ಯೋಜನೆ ಕುರಿತು ಅರಿವು ಮೂಡಿಸಲು ಜ.15ರಿಂದ ಫೆ.28ರವರೆಗೆ ರಾಜ್ಯವ್ಯಾಪಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ತಿಳಿಸಿದರು.

‘ಮನರೇಗಾ’ ಹೆಸರು ಬದಲಿಸಿ ಮಹಾತ್ಮ ಗಾಂಧಿ ಅವರನ್ನು ಅವಮಾನಿಸಲಾಗಿದೆ ಎಂಬುದಾಗಿ ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ. ‘ಜಿರಾಮ್‌ಜಿ’ ಯೋಜನೆ ಕುರಿತ ಸುಳ್ಳು ಆರೋಪಗಳ ವಿರುದ್ಧ ಬಿಜೆಪಿ ಅಭಿಯಾನ ಕೈಗೆತ್ತಿಕೊಂಡಿದೆ. ಮಂಡಲ, ಜಿಲ್ಲಾ ಮಟ್ಟದಲ್ಲಿ ಸಮಾವೇಶ ನಡೆಸಲಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಾಜ್ಯದಲ್ಲಿ ‘ಜಿರಾಮ್‌ಜಿ’ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಜನರಿಗೆ ಉದ್ಯೋಗ ಭದ್ರತೆ ಕಲ್ಪಿಸಿದ ಯೋಜನೆಯ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಕಾಂಗ್ರೆಸ್‌ ಕೈಬಿಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಯುಪಿಎ ಸರ್ಕಾರದ ಅವಧಿಯಲ್ಲಿ ರೂಪಿಸಿದ ಶಿಕ್ಷಣ ಮತ್ತು ಆಹಾರ ಹಕ್ಕು ಕಾಯ್ದೆಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ. ಕೇವಲ ಗುಂಡಿ ಅಗೆಯುವ ಮತ್ತು ಗುಂಡಿ ಮುಚ್ಚುವ ಕೆಲಸವಾಗಿದ್ದ ‘ಮನರೇಗಾ’ ಸ್ವರೂಪವನ್ನು ಅಭಿವೃದ್ಧಿಗೆ ಪೂರಕವಾಗಿ ಬದಲಿಸಲಾಗಿದೆ. ಇದನ್ನು ರಾಜಕೀಕರಣಗೊಳಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ’ ಎಂದು ದೂರಿದರು.

‘ಮನರೇಗಾ’ಗೆ 2005ರಲ್ಲಿ ಕಾನೂನು ಚೌಕಟ್ಟು ನೀಡಿ, 2009ರಲ್ಲಿ ಮಹಾತ್ಮ ಗಾಂಧೀಜಿ ಹೆಸರು ಸೇರಿಸಲಾಯಿತು. ಅಭಿವೃದ್ಧಿಗೆ ಪೂರಕವಾಗಿ ಕೆಲ ಬದಲಾವಣೆ ಮಾಡಲಾಗಿದೆ. ಕೆಲಸದ ದಿನಗಳನ್ನು 100ರಿಂದ 125ಕ್ಕೆ ಏರಿಸಲಾಗಿದೆ. ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ನಕಲಿ ಜಾಬ್‌ ಕಾರ್ಡ್, ಹಣ ದುರುಪಯೋಗಕ್ಕೆ ಕಡಿವಾಣ ಬಿದ್ದಿದೆ. ಹಾಜರಾತಿ, ಕಾಮಗಾರಿಯ ಸ್ಥಳ ಖಚಿತತೆಗೆ ತಂತ್ರಜ್ಞಾನದ ನೆರವು ಪಡೆಯಲಾಗಿದೆ’ ಎಂದು ವಿವರಿಸಿದರು.

ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಾಜಶೇಖರ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರಪ್ಪ, ಬಸವರಾಜ ನಾಯ್ಕ, ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್, ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಮುಖಂಡರಾದ ಕೋಳೆನಹಳ್ಳಿ ಬಿ.ಎಂ. ಸತೀಶ್, ಧನಂಜಯ ಕಡ್ಲೇಬಾಳು, ಚಂದ್ರಶೇಖರ್ ಪೂಜಾರ್, ಶಿವನಹಳ್ಳಿ ರಮೇಶ್ ಹಾಜರಿದ್ದರು.

‘ಮನರೇಗಾ’ದಲ್ಲಿ ಅನುದಾನ ದುರುಪಯೋಗ ವಿಪರೀತವಾಗಿತ್ತು. ಅಗತ್ಯವಿರುವ ಜನರಿಗೆ ಉದ್ಯೋಗ ಸಿಗುತ್ತಿರಲಿಲ್ಲ. ಕಾಂಗ್ರೆಸ್‌ ವಿನಾ ಕಾರಣ ಅಪಪ್ರಚಾರ ಮಾಡುತ್ತಿದೆ
ಎ.ಎಸ್. ಪಾಟೀಲ ನಡಹಳ್ಳಿ, ರಾಜ್ಯ ಘಟಕದ ಅಧ್ಯಕ್ಷ ಬಿಜೆಪಿ ರೈತ ಮೋರ್ಚಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.