ADVERTISEMENT

ಗುಜರಿ ಸೇರಲಿವೆ 39 ಲಕ್ಷ ವಾಹನ

ಆತಂಕದಲ್ಲಿ ಆಟೋರಿಕ್ಷಾ, ಲಾರಿ, ಟ್ಯಾಕ್ಸಿ ಮಾಲೀಕರು

ವಿಜಯಕುಮಾರ್ ಎಸ್.ಕೆ.
Published 10 ಫೆಬ್ರುವರಿ 2021, 19:31 IST
Last Updated 10 ಫೆಬ್ರುವರಿ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿಯನ್ನು ಕೇಂದ್ರ ಸರ್ಕಾರ ‌ಜಾರಿಗೆ ಬಂದರೆ ರಾಜ್ಯದಲ್ಲಿರುವ 2.46 ಕೋಟಿ ವಾಹನಗಳಲ್ಲಿ 39 ಲಕ್ಷ ವಾಹನಗಳು ಗುಜರಿ ಸೇರಲಿವೆ.

20 ವರ್ಷಕ್ಕಿಂತ ಹಳೆಯ ಖಾಸಗಿ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನಗಳನ್ನು ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕಿಸಿ ಹೊಸ ವಾಹನಗಳ ಖರೀದಿಗೆ ಜನರನ್ನು ಪ್ರೇರೇಪಿಸುವುದು ಇದರ ಉದ್ದೇಶ. ಈ ನಿಯಮ ಜಾರಿಗೆ ಬಂದರೆ ಶೇ 15ರಿಂದ ಶೇ 20ರಷ್ಟು ವಾಹನಗಳು ಗುಜರಿಗೆ ಹೋಗಬೇಕಾಗುತ್ತದೆ.

ಗುಜರಿಗೆ ಹಾಕಲು ಬಯಸದಿದ್ದರೆ ಹಸಿರು ತೆರಿಗೆ ಪಾವತಿಸಬೇಕು ಮತ್ತು ಸಂಚಾರಕ್ಕೆ ಯೋಗ್ಯವಿದೆಯೇ ಎಂಬುದಕ್ಕೆ ಯೋಗ್ಯತಾ ಪ್ರಮಾಣ ಪತ್ರವನ್ನು(ಎಫ್‌ಸಿ) ವರ್ಷಕ್ಕೊಮ್ಮೆ ಪಡೆಯಬೇಕಾಗುತ್ತದೆ.

ADVERTISEMENT

ಹಸಿರು ತೆರಿಗೆ ಮತ್ತು ಎಫ್‌ಸಿ ಮಾಡಿಸಲು ಹೋಗುವ ಬದಲು ರಿಯಾಯಿತಿ ದೊರೆತರೆ ಹೊಸ ವಾಹನಗಳ ಖರೀದಿಗೆ ಜನ ಆಸಕ್ತಿ ತೋರುವ ಸಾಧ್ಯತೆ ಇದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿ 20 ವರ್ಷ ಪೂರೈಸಿರುವ ವಾಹನಗಳು 39 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಇವೆ. ಇವುಗಳಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಶೇ 70ರಷ್ಟು ಅಂದರೆ 22 ಲಕ್ಷಕ್ಕೂ ಅಧಿಕ.

15 ವರ್ಷ ಮೇಲ್ಪಟ್ಟಿರುವ ವಾಣಿಜ್ಯ ವಾಹನಗಳಲ್ಲಿ ಲಾರಿಗಳ ಸಂಖ್ಯೆಯೇ ಹೆಚ್ಚು. 3.95 ಲಕ್ಷ ಲಾರಿಗಳು, 2.80 ಲಕ್ಷ ಆಟೋರಿಕ್ಷಾ, 53 ಸಾವಿರ ಟ್ಯಾಕ್ಸಿಗಳು, 45 ಸಾವಿರ ಬಸ್‌ಗಳ ಮಾಲೀಕರಲ್ಲಿ ಆತಂಕ ಮನೆ ಮಾಡಿದೆ.

‘ಒಂದು ವಾಹನ ಎಷ್ಟು ವರ್ಷಗಳ ನಂತರ ಗುಜರಿ ಸೇರಬೇಕು ಎಂಬುದರ ಬಗ್ಗೆ ದೇಶದಲ್ಲಿ ನಿಯಮ ಇರಲಿಲ್ಲ. ಹೊರ ದೇಶಗಳಲ್ಲಿ ಈಗಾಗಲೇ ಇದೆ. ಈ ನಿಯಮ ಬರಲೇಬೇಕಿತ್ತು. ಜಾರಿಗೆ ಬರುವುದರಿಂದ ಮಾಲಿನ್ಯ ಕಡಿಮೆಯಾಗಲಿದೆ’ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಬೀದಿಗೆ ಬೀಳುವ ಲಾರಿ ಮಾಲೀಕರು

‘ಗುಜರಿ ನೀತಿ ಜಾರಿಗೆ ಬಂದರೆ ಸಾವಿರಾರು ಲಾರಿ ಮಾಲೀಕರ ಕುಟುಂಬಗಳು ಬೀದಿಗೆ ಬೀಳಲಿವೆ’ ಎಂದು ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಹೇಳಿದರು.

ಹೊಸ ಲಾರಿಗಳು ಮೊದಲ ಐದಾರು ವರ್ಷ ದೂರದ ಊರುಗಳ ಬಾಡಿಗೆಗೆ ಹೋದರೆ, ಬಳಿಕ ಅಕ್ಕ–ಪಕ್ಕದ ರಾಜ್ಯಗಳಿಗೆ ಮಾತ್ರ ಸಂಚರಿಸುತ್ತವೆ. 10–11 ವರ್ಷ ಹಳೆಯದಾದ ಲಾರಿಗಳು ಸ್ಥಳೀಯವಾಗಿಯೇ ಸಂಚರಿಸುತ್ತವೆ. ರೈಲ್ವೆ ಗೂಡ್ಸ್‌, ಎಪಿಎಂಸಿಗಳಿಗೆ ಬಾಡಿಗೆ ಓಡುತ್ತವೆ.

‘10 ವರ್ಷ ಕಳೆದ ನಂತರ ಆ ಲಾರಿಗಳ ದಿನದ ವಹಿವಾಟು ₹3 ಸಾವಿರ ದಾಟುವುದಿಲ್ಲ. ಅಂತಹ ಲಾರಿಗಳ ಮಾಲೀಕರು ಈಗ ಬೀದಿಗೆ ಬೀಳಬೇಕಾಗುತ್ತದೆ. ಪೂರ್ವ ತಯಾರಿ ಮಾಡಿಕೊಂಡು ಹಂತ–ಹಂತವಾಗಿ ಮಾಡಬೇಕಿದ್ದ ಕೆಲಸವನ್ನು ಸರ್ಕಾರ ಏಕಾಏಕಿ ಮಾಡಲು ಹೊರಟಿದೆ. ಇದರಿಂದ ಬಡ ಲಾರಿ ಮಾಲೀಕರು ತೊಂದರೆಗೆ ಸಿಲುಕಲಿದ್ದಾರೆ’ ಎಂದು ಹೇಳಿದರು.

‘ಬರಿಗೈ ಆಗುವ ಆಟೋರಿಕ್ಷಾ ಮಾಲೀಕರು’

ಗುಜರಿ ನೀತಿ ಜಾರಿಯಾದರೆ ಶೇ 50ಕ್ಕೂ ಅಧಿಕ ಆಟೋರಿಕ್ಷಾ ಮಾಲೀಕರು ಬರಿಗೈ ಆಗಲಿದ್ದಾರೆ ಎಂದು ಆಟೋರಿಕ್ಷಾ ಮತ್ತು ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಜವರೇಗೌಡ ಆತಂಕ ವ್ಯಕ್ತಪಡಿಸಿದರು.

‘ಬಾಡಿಗೆ ಆಟೋರಿಕ್ಷಾ ಓಡಿಸಿ ಹಣ ಒಟ್ಟುಗೂಡಿಸಿ ಹಳೇ ಆಟೋರಿಕ್ಷಾಗಳನ್ನು ಖರೀದಿಸಿ ಸಾಕಷ್ಟು ಚಾಲಕರು ಜೀವನ ನಡೆಸುತ್ತಿದ್ದಾರೆ. ಈಗ ಆ ರಿಕ್ಷಾಗಳು ಗುಜರಿಗೆ ಸೇರಿದರೆ ದುಡಿಮೆಯೇ ಇಲ್ಲವಾಗಲಿದೆ. ಇಡೀ ಕುಟುಂಬ ಬೀದಿಗೆ ಬೀಳಲಿದೆ’ ಎಂದು ಹೇಳಿದರು.

‘ಮೆಟ್ರೊ ರೈಲು, ಓಲಾ, ಉಬರ್ ರೀತಿಯ ಆ್ಯಪ್ ಆಧಾರಿತ ಟ್ಯಾಕ್ಸಿಗಳು ಇರುವ ಕಾರಣ ರಿಕ್ಷಾಗಳಿಗೆ ಮೊದಲೇ ಪ್ರಯಾಣಿಕರಿಲ್ಲ. ಫೈನಾನ್ಸ್‌ಗಳಲ್ಲಿ ಸಾಲ ಪಡೆದು ಹೊಸ ರಿಕ್ಷಾ ಖರೀಸಿದರೆ ಅದಕ್ಕೆ ಬಡ್ಡಿ ಪಾವತಿಸುವುದೂ ಕಷ್ಟವಾಗಲಿದೆ. 60 ವರ್ಷ ದಾಟಿದವರಿಗೆ ಬ್ಯಾಂಕ್‌ಗಳು ಸಾಲ ಕೊಡುವುದಿಲ್ಲ. ಯಾವುದೇ ಮುಂದಾಲೋಚನೆ ಇಲ್ಲದೆ ಕೇಂದ್ರ ಸರ್ಕಾರ ಈ ನೀತಿ ಜಾರಿಗೆ ತರಲು ಹೊರಟಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.