ADVERTISEMENT

ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣವಿರಲಿ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅಭಿಮತ

‘ನೆಲೆಗಟ್ಟಿನ ಭಾಷೆಗೆ ಮೊದಲ ಪ್ರಾಶಸ್ತ್ಯ ಸಿಗಬೇಕು’

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 18:41 IST
Last Updated 13 ಜುಲೈ 2019, 18:41 IST
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಸ್ವರ್ಣ ಜಯಂತಿ ಸಮಾರೋಪ ಸಮಾರಂಭದಲ್ಲಿ ವಿವಿಧ ಕೇಂದ್ರಗಳ ಶಿಲಾನ್ಯಾಸ ನೆರವೇರಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನಾಮಫಲಕಗಳ ಮೇಲೆ ಕಣ್ಣಾಡಿಸಿದರು. ಮೇಯರ್ ಪುಷ್ಪಲತಾ ಜಗನ್ನಾಥ್, ಸಂಸದ ಪ್ರತಾಪ್‌ ಸಿಂಹ, ಭಾರತೀಯ ಭಾಷಾ ಸಂಸ್ಥಾನದ ಮೊದಲ ನಿರ್ದೇಶಕ ಡಿ.ಪಿ.ಪಟ್ನಾಯಕ್‌, ಹಾಲಿ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಇದ್ದಾರೆ ಪ್ರಜಾವಾಣಿ ಚಿತ್ರ
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಸ್ವರ್ಣ ಜಯಂತಿ ಸಮಾರೋಪ ಸಮಾರಂಭದಲ್ಲಿ ವಿವಿಧ ಕೇಂದ್ರಗಳ ಶಿಲಾನ್ಯಾಸ ನೆರವೇರಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನಾಮಫಲಕಗಳ ಮೇಲೆ ಕಣ್ಣಾಡಿಸಿದರು. ಮೇಯರ್ ಪುಷ್ಪಲತಾ ಜಗನ್ನಾಥ್, ಸಂಸದ ಪ್ರತಾಪ್‌ ಸಿಂಹ, ಭಾರತೀಯ ಭಾಷಾ ಸಂಸ್ಥಾನದ ಮೊದಲ ನಿರ್ದೇಶಕ ಡಿ.ಪಿ.ಪಟ್ನಾಯಕ್‌, ಹಾಲಿ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಇದ್ದಾರೆ ಪ್ರಜಾವಾಣಿ ಚಿತ್ರ   

ಮೈಸೂರು: ಸರ್ಕಾರಿ ಕಚೇರಿ ಸೇರಿದಂತೆ, ಜನರೊಟ್ಟಿಗೆ ವ್ಯವಹರಿಸುವಾಗ ಅಧಿಕಾರಿಗಳು ಆಯಾ ನೆಲೆಗಟ್ಟಿನ ಸ್ಥಳೀಯ ಭಾಷೆಯನ್ನೇ ಬಳಸಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹೇಳಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಭಾರತೀಯ ಭಾಷಾ ಸಂಸ್ಥಾನದ ಸ್ವರ್ಣಜಯಂತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ತಂಬಾಕು ಬೆಳೆಯ ಸಮಸ್ಯೆ ಬಗ್ಗೆ ಪಿರಿಯಾಪಟ್ಟಣ ತಾಲ್ಲೂಕಿನ ರೈತರ ಬಳಿ, ಅಧಿಕಾರಿಗಳು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಅವರಿಗೆ ಏನು ಅರ್ಥವಾಗುತ್ತದೆ? ಸ್ಥಳೀಯ ಭಾಷೆ ಕನ್ನಡದಲ್ಲೇ ಮಾತನಾಡಿದರೆ ಸಹಕಾರಿಯಾಗಲಿದೆ’ ಎಂದು ಉದಾಹರಣೆಯೊಂದಿಗೆ ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯವನ್ನು ಒತ್ತಿ ಹೇಳಿದರು.

ಕನ್ನಡದಲ್ಲೇ ಮಾತು ಆರಂಭಿಸಿದ ವೆಂಕಯ್ಯ ನಾಯ್ಡು, ಭಾಷಣದಲ್ಲಿ ಹಿಂದಿ, ಇಂಗ್ಲಿಷ್‌, ತೆಲುಗನ್ನೂ ಬಳಸಿದರು.

ADVERTISEMENT

‘ಮಗುವಿನ ಆರಂಭಿಕ ಶಿಕ್ಷಣ ಹಾಗೂ ಐದನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣ ಮಾತೃ ಭಾಷಾ ಮಾಧ್ಯಮದಲ್ಲೇ ಆಗಬೇಕು. ನಂತರ, ಎರಡನೇ ಭಾಷೆಯಾಗಿ ತಮಗಿಷ್ಟವಾದುದನ್ನು ಕಲಿಯುವ ಮುಕ್ತ ಅವಕಾಶವಿರಬೇಕು ಎಂದು ಪ್ರತಿಪಾದಿಸಿದರು.

‘ಅಂತರ್ಜಾಲ ಬಳಕೆ ಇದೀಗ ಗ್ರಾಮೀಣ ಪ್ರದೇಶದಲ್ಲೂ ಹೆಚ್ಚಿದೆ. ಆಯಾ ಪ್ರದೇಶದ ಭಾಷೆಯಲ್ಲೇ ವಿಷಯವನ್ನು ಆನ್‌ಲೈನ್‌ನಲ್ಲಿ ಅಡಕಗೊಳಿಸಿದರೆ, ಹೆಚ್ಚೆಚ್ಚು ಜನರನ್ನು ತಲುಪಲಿದೆ. ಸಾಕ್ಷರತೆ, ಆರ್ಥಿಕತೆಗೆ ಉತ್ತೇಜನ ನೀಡುವ ಯುಗಕ್ಕೆ ಮುನ್ನುಡಿ ಬರೆದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಭಾಷೆ ಉಳಿವು ಯುವಜನತೆ ಕೈಯಲ್ಲಿ:‘ಭಾರತದಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಶೇ 65ರಷ್ಟು ಇದೆ. ಈ ಪೀಳಿಗೆ ತಮ್ಮ ಮಾತೃ ಭಾಷೆಯನ್ನು ಸಶಕ್ತವಾಗಿ ಬಳಸಿದಾಗ ಮಾತ್ರ, ಭಾಷೆಗಳು ಮುಂದಿನ ಪೀಳಿಗೆಗೂ ಉಳಿಯುತ್ತವೆ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ’ ಎಂದರು.

‘ಹಿಂದಿ ಭಾಷೆ ವಿರೋಧಿಸಿದ್ದೆ!’
ಹಿಂದಿ ಭಾಷೆಗೆ ವಿರೋಧ ವ್ಯಕ್ತಪಡಿಸಿ ಆಂಧ್ರಪ್ರದೇಶದಲ್ಲಿ ಹೋರಾಟಕ್ಕಿಳಿದಿದ್ದ ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡ ಅವರು, ಅಂದು ವಿರೋಧಿಸಿದ ತಾವೇ ಆ ಭಾಷೆಯನ್ನು ಹಣೆಯಲ್ಲಿ ಬರೆದುಕೊಳ್ಳುವಂತಾಯಿತು ಎಂದು ಸಮಾರಂಭದಲ್ಲಿ ಹೇಳಿದರು.

ಅಂಚೆ ಕಚೇರಿಯ ಪೋಸ್ಟ್‌ ಡಬ್ಬಗಳು, ರೈಲ್ವೆ ಇಲಾಖೆಯ ನಾಲಫಲಕಗಳಲ್ಲಿನ ಹಿಂದಿ ಅಕ್ಷರಗಳಿಗೆ ಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾಗಿ ಹೇಳಿದ ಅವರು, ಬಿಜೆಪಿಯಲ್ಲಿ ಪ್ರವರ್ಧಮಾನಕ್ಕೆ ಬಂದು 1993ರಲ್ಲಿ ನವದೆಹಲಿಗೆ ತೆರಳಿದ ಬಳಿಕ ಹಿಂದಿಯೂ ತಮ್ಮದೇ ಭಾಷೆಯಾದ ಬಗೆಯನ್ನು ಬಿಡಿಸಿಟ್ಟರು.

ಇವರ್‍ಯಾರೂ ಕಾನ್ವೆಂಟ್‌ನಲ್ಲಿ ಓದಿಲ್ಲ: ‘ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ, ಪಳನಿಸ್ವಾಮಿ, ಪಿಣರಾಯಿ ವಿಜಯನ್, ಜಗನ್‌ ಮೋಹನ್‌ರೆಡ್ಡಿ ಯಾವ ಕಾನ್ವೆಂಟ್‌ಗಳಲ್ಲೂ ಶಿಕ್ಷಣ ಪಡೆದವರಲ್ಲ. ಉನ್ನತ ಕನಸು ಕಂಡು, ಅದರ ಸಾಕಾರಕ್ಕಾಗಿ ಕಠಿಣ ಪರಿಶ್ರಮಪಟ್ಟವರು. ತಾಳ್ಮೆಯಿಂದ ಉನ್ನತ ಸ್ಥಾನಗಳನ್ನು ತಲುಪಿದವರು’ ಎಂದು ವೆಂಕಯ್ಯನಾಯ್ಡು ಹೇಳಿದರು.

ಎನ್‌ಇಪಿಯಿಂದಆಮೂಲಾಗ್ರ ಬದಲಾವಣೆ
ಮೈಸೂರು: ಹಲವು ಶಿಫಾರಸುಗಳನ್ನು ನೀಡಿರುವ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಜಾರಿಗೆ ಬಂದರೆ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಉಂಟಾಗಲಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ (ಆರ್‌ಐಇ) ಶನಿವಾರ ಡಾ.ಎಸ್‌.ರಾಧಾಕೃಷ್ಣನ್ ಸಭಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶೈಕ್ಷಣಿಕ ರಂಗದ ಸಾಲು ಸಾಲು ಸವಾಲುಗಳನ್ನು ಎದುರಿಸಲು ಶಿಕ್ಷಕರು ತಮ್ಮ ಕೌಶಲ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ನೆಲ್ಲೋರ್‌ನಲ್ಲಿ ಹೊಸ ಪ್ರಾದೇಶಿಕ ಶಿಕ್ಷಣ ಸಂಸ್ಥೆ: ‘ದಕ್ಷಿಣ ಭಾರತದಲ್ಲಿ ಮೈಸೂರಿನಲ್ಲಿ ಮಾತ್ರ ಪ್ರಾದೇಶಿಕ ಶಿಕ್ಷಣ ಕೇಂದ್ರ ಇದ್ದು, ಹೆಚ್ಚಿನ ಒತ್ತಡ ಬೀಳುತ್ತಿದೆ.ಆದ್ದರಿಂದ ಆಂಧ್ರಪ್ರದೇಶದ ನೆಲ್ಲೋರ್‌ನಲ್ಲಿ ಹೊಸ ಕೇಂದ್ರವನ್ನು ಆರಂಭಿಸಲಾಗುವುದು. ಅದು ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ’ಎಂದು ನವದೆಹಲಿಯ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ನಿರ್ದೇಶಕ ಪ್ರೊ.ಎಚ್‌.ಕೆ.ಸೇನಾಪತಿ ತಿಳಿಸಿದರು.

**
ಭಾಷೆಗಳು ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ನಮ್ಮನ್ನು ಒಂದುಗೂಡಿಸಬೇಕು. ವಿಭಜಿಸುವ ಸಾಧನಗಳಾಗಬಾರದು. ಯಾವುದೇ ಭಾಷೆಯ ಹೇರಿಕೆ ಇರಬಾರದು.
-ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.