
2,443 ರೈತರ ಕುಟುಂಬಕ್ಕೆ ಪರಿಹಾರ
ರಾಜ್ಯದಲ್ಲಿ 2023ರಿಂದ 2025ರ ಡಿಸೆಂಬರ್ ಅಂತ್ಯದವರೆಗೆ ಒಟ್ಟು 2,846 ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ದಾಖಲಾಗಿವೆ. ಇವುಗಳ ಪರಿಶೀಲನೆ ನಡೆಸಿ, 2,443 ರೈತರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಹೇಳಿದರು.
ಬಿಜೆಪಿಯ ಹಣಮಂತ ನಿರಾಣಿ ಅವರು ಪ್ರಶ್ನೆಗೆ ಉತ್ತರಿಸಿದ ಅವರು, ಮಿನಿ ಆಹಾರ, ಪಾರ್ಕ್‌ಗಳ ಸ್ಥಾಪನೆ, ರೈತಶಕ್ತಿ ಮತ್ತು ಮುಖ್ಯಮಂತ್ರಿ ಯವರ ನೈಸರ್ಗಿಕ ಕೃಷಿ ಯೋಜನೆಗಳನ್ನು ಮುಂದುವರಿಸಿಲ್ಲ ಎಂದರು.
ವಿದ್ಯಾರ್ಥಿಗಳಿಗೆ ಮಹಾಪುರುಷರ ಪುಸ್ತಕ
ಬೆಂಗಳೂರು: ಮಹಾಪುರುಷರ ತತ್ವ ಸಿದ್ಧಾಂತಗಳು, ಅವರ ಜೀವನದ ಆದರ್ಶಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ರಾಜ್ಯದ ಎಲ್ಲ ಶಾಲೆ–ಕಾಲೇಜುಗಳ ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಡಾ. ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘32 ಮಹಾಪುರುಷರ ಜಯಂತಿ ಕಾರ್ಯಕ್ರಮ ಗಳನ್ನು ರಾಜ್ಯಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಅವರ ಜೀವನದ ಪುಸ್ತಕಗಳನ್ನು ಶಿಕ್ಷಣ ಇಲಾಖೆಯ ಮೂಲಕ ವಿತರಿಸಲಾಗುತ್ತದೆ’ ಎಂದರು.
ರಸಗೊಬ್ಬರದ ಕೊರತೆ ಇಲ್ಲ
‘ಪ್ರಸಕ್ತ ಸಾಲಿನಲ್ಲಿ ರಸಗೊಬ್ಬರ ಕೊರತೆ ಇಲ್ಲ. 2025ರ ಅಕ್ಟೋಬರ್‌ನಿಂದ 2026ರ ಜನವರಿವರೆಗೆ 12.46 ಲಕ್ಷ ಟನ್ ರಸಗೊಬ್ಬರದ ಬೇಡಿಕೆ ಇದ್ದು, ಈವರೆಗೆ 21.89 ಲಕ್ಷ ಟನ್ ಪೂರೈಕೆಯಾಗಿದೆ. ಇದರಲ್ಲಿ11.71 ಲಕ್ಷ ಟನ್ ಮಾರಾಟವಾಗಿದ್ದು, 10.18 ಲಕ್ಷ ಮೆಟ್ರಿಕ್ ಟನ್ ದಾಸ್ತಾನಿದ್ದು, ರಸ ಗೊಬ್ಬರದ ಕೊರತೆಯಿರುವುದಿಲ್ಲ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಬಿಜೆಪಿಯ ಕೆ.ವಿವೇಕಾನಂದ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಕ್ರಮ ದಾಸ್ತಾನು, ಕಾಳಸಂತೆ ಮಾರಾಟಗಾರರ ಮೇಲೆ 530 ಪ್ರಕರಣ ದಾಖಲಿಸಿ, 4,174 ಟನ್‌ನಷ್ಟು ಗೊಬ್ಬರವನ್ನು ಜಪ್ತಿ ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.