ಸಚಿವ ಆರ್.ಬಿ. ತಿಮ್ಮಾಪುರ
ಸುವರ್ಣ ವಿಧಾನಸೌಧ (ಬೆಳಗಾವಿ): ‘ಇಲಾಖೆಯಲ್ಲಿ ನಡೆದ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ದಾಖಲೆ ನೀಡಿದರೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಕೆ.ಎಸ್. ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ವರ್ಗಾವಣೆ ಒಂದು ನೀತಿ. ಅದರ ಪ್ರಕಾರ ಮಾಡಿದ್ದೇವೆ. ಯಾರೊ ಆರೋಪಿಸಿದರು, ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ ಎನ್ನುವುದಕ್ಕೆಲ್ಲ ಉತ್ತರಿಸಲು ಸಾಧ್ಯ ಇಲ್ಲ’ ಎಂದರು.
ಇಲಾಖೆಯ ಅಧಿಕಾರಿಯೊಬ್ಬರು ಈ ಬಗ್ಗೆ ಸಂಭಾಷಣೆ ನಡೆಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದನ್ನು ನವೀನ್ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ತಿಮ್ಮಾಪುರ, ‘ಆ ಅಧಿಕಾರಿಯನ್ನು 24 ಗಂಟೆಯ ಒಳಗೆ ಅಮಾನತು ಮಾಡಿದ್ದೇನೆ’ ಎಂದರು.
‘2023 ಡಿಸೆಂಬರ್‌ನಿಂದ 2024ರ ನವಂಬರ್‌ವರೆಗೆ ಜಂಟಿ ಆಯುಕ್ತರು, ಉಪ ಆಯುಕ್ತರು, ಉಪ ಅಧೀಕ್ಷಕರು, ನಿರೀಕ್ಷಕರು, ಉಪ ನಿರೀಕ್ಷರು ಸೇರಿ ವಿವಿಧ ವೃಂದಗಳ ಒಟ್ಟು 336 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಕಳೆದೊಂದು ವರ್ಷದಲ್ಲಿ 573 ಸಿಎಲ್–7 ಪರವಾನಗಿ ನೀಡಲಾಗಿದೆ’ ಎಂದು ಸಚಿವರು ಮಾಹಿತಿ ನೀಡಿದರು.
ಈ ಮಧ್ಯೆ ಸಭಾಪತಿ ಬಸವರಾಜ ಹೊರಟ್ಟಿ ಮತ್ತೊಬ್ಬ ಸದಸ್ಯರಿಗೆ ಬೇರೆ ಪ್ರಶ್ನೆ ಕೇಳಲು ಅವಕಾಶ ನೀಡಿದಾಗ, ತಮ್ಮ ಪ್ರಶ್ನೆಗೆ ಸಚಿವರು ಸಮರ್ಪಕವಾದ ಉತ್ತರ ನೀಡಿಲ್ಲ ಎಂದು ಸಿಟ್ಟಿಗೆದ್ದ ನವೀನ್, ಪೀಠದ ಎದುರು ಧರಣಿ ನಡೆಸಲು ಮುಂದಾದ ಪ್ರಸಂಗವೂ ನಡೆಯಿತು.
ಮತ್ತೆ ಮಾತನಾಡಿದ ಸಚಿವರು, ‘ಭ್ರಷ್ಟಾಚಾರ ನಡೆದಿದೆ ಎಂದು ಅಸ್ತಿತ್ವದಲ್ಲಿಯೇ ಇಲ್ಲದ ಸಂಸ್ಥೆ ಆರೋಪಿಸಿದೆ. ಈ ಸಂಸ್ಥೆ 20 ವರ್ಷಗಳಿಂದ ಲೆಕ್ಕಪರಿಶೋಧನೆಯನ್ನೇ ಮಾಡಿಲ್ಲ. ಅಷ್ಟೇ ಅಲ್ಲ, ಈ ರೀತಿಯ ಆರೋಪ ಈ ಹಿಂದಿನ ಎಲ್ಲ ಅಬಕಾರಿ ಸಚಿವರೂ ಮೇಲೂ ಬಂದಿದೆ’ ಎಂದು ಪತ್ರಗಳನ್ನು ಪ್ರದರ್ಶಿಸಿದರು.
‘ಸೀನಾ ನದಿಗೆ ಸುರಂಗ ಕೊರೆದು ನೀರು’: ‘ಮಹಾರಾಷ್ಟ್ರ ಸರ್ಕಾರ ಅಕ್ರಮವಾಗಿ ಸುರಂಗ ಕೊರೆದು ಸೀನಾ ನದಿಗೆ ಭೀಮಾ ನದಿಯಿಂದ ನೀರು ಹರಿಸುತ್ತಿರುವ ಬಗ್ಗೆ ರಾಜ್ಯದಿಂದ ತಂಡ ಕಳುಹಿಸಿ ವರದಿ ಪಡೆಯಲಾಗುವುದು’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬಿಜೆಪಿಯ ತಳವಾರ ಸಾಬಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಸೀನಾ ನದಿಯು ಭೀಮಾ ನದಿಯ ಉಪ ನದಿ. ಕೃಷ್ಣ ಜಲ ನ್ಯಾಯಮಂಡಳಿ–2ಕ್ಕೆ ಮಹಾರಾಷ್ಟ್ರ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಉಜ್ಜಿನ ಜಲಾಶಯದಿಂದ ಸೀನಾ ನದಿಗೆ ನೀರು ಹರಿಸುತ್ತಿದೆ’ ಎಂದರು.
‘ಆಭರಣ ವರ್ತಕರಿಂದ ₹1,396 ಕೋಟಿ ಜಿಎಸ್‌ಟಿ ಸಂಗ್ರಹ’: ‘ರಾಜ್ಯದಲ್ಲಿ ಅಭರಣ ವರ್ತಕರಿಂದ 2021–22ನೇ ಸಾಲಿನಿಂದ ಪ್ರಸಕ್ತ ಸಾಲಿನ ನವಂಬರ್‌ವರೆಗೆ ₹1,396 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಸಭಾ ನಾಯಕ ಎನ್.ಎಸ್. ಬೋಸರಾಜು ತಿಳಿಸಿದರು.
ಜೆಡಿಎಸ್‌ನ ಟಿ.ಎ. ಶರವಣ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರಿಸಿದ ಅವರು,‘ರಾಜ್ಯದಲ್ಲಿ 2021–22ರಲ್ಲಿ ಒಟ್ಟು ₹95,817 ಕೋಟಿ ಜಿಎಸ್‌ಟಿ ಸಂಗ್ರಹ ಆಗಿತ್ತು. ಪ್ರಸಕ್ತ ಸಾಲಿನಲ್ಲಿ ನವೆಂಬರ್ ಅಂತ್ಯದವರೆಗೆ ₹1,04,839 ಕೋಟಿ ಸಂಗ್ರಹವಾಗಿದೆ’ ಎಂದರು.
‘ಜಿಎಸ್‌ಟಿ ಸಂಗ್ರಹಿಸುವ ಹೆಸರಿನಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ’ ಎಂದು ಶರವಣ ಆರೋಪಿಸಿದಾಗ, ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ಬಗ್ಗೆ ಎಚ್ಚರಿಕೆ ನೀಡುವುದಾಗಿ ಬೋಸರಾಜು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.