ADVERTISEMENT

ಹೊರಟ್ಟಿ ಬದಲು ಪಾಟೀಲರಿಗೆ ಪಟ್ಟ?

ಸಭಾಪತಿ ‘ಪಟ್ಟ’ಕ್ಕೆ ದೋಸ್ತಿಗಳ ಮಧ್ಯೆ ಮುಸುಕಿನ ಗುದ್ದಾಟ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 20:30 IST
Last Updated 9 ಡಿಸೆಂಬರ್ 2018, 20:30 IST

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ಇದೇ 12ರಂದು ಚುನಾವಣೆ ನಿಗದಿಯಾಗಿದ್ದು, ಆಯ್ಕೆ ವಿಷಯ ‘ಮೈತ್ರಿ’ ಪಕ್ಷಗಳ (ಕಾಂಗ್ರೆಸ್‌–ಜೆಡಿಎಸ್‌) ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನೇ ಸಭಾಪತಿಯಾಗಿ ಮಾಡಲು ಜೆಡಿಎಸ್‌ ಬಯಸಿದೆ. ಆದರೆ, ವಿಧಾನಪರಿಷತ್‌ನಲ್ಲಿ ಬಹುಮತ ಇರುವ ಕಾಂಗ್ರೆಸ್‌ಗೆ ಆ ಸ್ಥಾನ ಬಿಟ್ಟು ಕೊಡಬೇಕೆಂದು ಪಟ್ಟು ಹಿಡಿದಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಆ ಪಟ್ಟದಲ್ಲಿ ಎಸ್‌.ಆರ್‌. ಪಾಟೀಲ ಅವರನ್ನು ಕುಳ್ಳಿರಿಸಲು ಚಿಂತನೆ ನಡೆಸಿದ್ದಾರೆ.

ಸಭಾಪತಿ ಸ್ಥಾನದಲ್ಲೇ ಮುಂದುವರಿಸುವುದಾಗಿ ಹೊರಟ್ಟಿಗೆ ಭರವಸೆ ನೀಡಿದ್ದ ಜೆಡಿಎಸ್‌ ವರಿಷ್ಠ ದೇವೇಗೌಡರು, ಈ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರದೇ ಇರುವುದರಿಂದ ಸಿದ್ದರಾಮಯ್ಯ ಕೈ ಮೇಲಾಗುವ ಸಾಧ್ಯತೆ ಇದೆ. ಹೊರಟ್ಟಿಗೆ ಸ್ಥಾನ ಕೈ ತಪ್ಪಿದರೆ ಎಸ್‌.ಆರ್‌. ಪಾಟೀಲ ಸಭಾಪತಿಯಾಗಿ ಚುನಾಯಿತರಾಗುವುದು ಬಹುತೇಕ ಖಚಿತ.

ADVERTISEMENT

‘ಸರ್ಕಾರ ರಚನೆ ವೇಳೆ ಸಭಾಪತಿ ಸ್ಥಾನ ತಮಗೆ ನೀಡುವಂತೆ ಕಾಂಗ್ರೆಸ್‌ ಷರತ್ತು ವಿಧಿಸಿರಲಿಲ್ಲ. ವಿಧಾನಸಭೆ ಸಭಾಧ್ಯಕ್ಷ ವಿಷಯದಲ್ಲಿ ಕಾಂಗ್ರೆಸ್‌ಗೆ ಭೇಷರತ್‌ ಬೆಂಬಲ ನೀಡಿದ್ದೇವೆ. ಇದೀಗ ಸಭಾಪತಿ ಸ್ಥಾನ ಬಿಟ್ಟುಕೊಡಬೇಕೆಂದು ಕಾಂಗ್ರೆಸ್‌ ಹಟ ಹಿಡಿದಿರುವುದು ಸರಿಯಲ್ಲ’ ಎನ್ನುವುದು ಜೆಡಿಎಸ್‌ ನಾಯಕರ ಮಾತು.

ಕಾಂಗ್ರೆಸ್‌ ಸದ್ಯ 39 ಸ್ಥಾನಗಳನ್ನು (ಪಕ್ಷೇತರ ಸದಸ್ಯ ವಿವೇಕರಾವ್ ಪಾಟೀಲ ಸೇರಿ) ಹೊಂದಿದ್ದು, ತನ್ನ ಸ್ವಂತ ಶಕ್ತಿಯ ಮೇಲೆ ವಿಧಾನಪರಿಷತ್‌ ಎಲ್ಲಾ ಮೂರು ಸ್ಥಾನಗಳನ್ನು (ಸಭಾಪತಿ, ಉಪಸಭಾಪತಿ ಮತ್ತು ಮುಖ್ಯ ಸಚೇತಕ) ಗೆದ್ದುಕೊಳ್ಳುವ ಅವಕಾಶ ಇದೆ. ಮೈತ್ರಿ ‘ಸೂತ್ರ’ದಂತೆ ಹಂಗಾಮಿ ಸಭಾಪತಿಯಾಗಿ ಆಯ್ಕೆಯಾಗಿದ್ದ ಹೊರಟ್ಟಿ, ಈ ಹಿಂದಿನ ಅಧಿವೇಶನದ ಕಲಾಪ ನಿಭಾಯಿಸಿದ್ದರು.

‘ನೈತಿಕವಾಗಿ ಕಾಂಗ್ರೆಸ್‌ಗೆ ಸಿಗಬೇಕು’

‘ನೈತಿಕವಾಗಿ ಸಭಾಪತಿ ಸ್ಥಾನ ಕಾಂಗ್ರೆಸ್‌ಗೆ ಸಿಗಬೇಕು. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಮುಖಂಡರಾದ ಸಿದ್ದರಾಮಯ್ಯ ಒತ್ತಡ ತರಬೇಕು. ಪಕ್ಷದಿಂದ ಈ ಸ್ಥಾನಕ್ಕೆ ಯಾರನ್ನೂ ಬೇಕಾದರೂ ಆಯ್ಕೆ ಮಾಡಲಿ. ಆ ಬಗ್ಗೆ ತಕರಾರು ಇಲ್ಲ’ ಎಂದು ಎಸ್‌.ಆರ್‌. ಪಾಟೀಲ ಪ್ರತಿಕ್ರಿಯಿಸಿದ್ದಾರೆ.

‘ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಗಳ ಪೈಕಿ ಪ್ರಮುಖ ಖಾತೆಗಳನ್ನು ಜೆಡಿಎಸ್‌ಗೆ ನೀಡಿದ್ದೇವೆ. ಸಭಾಪತಿ ಸ್ಥಾನವನ್ನೂ ಅವರೇ ಇಟ್ಟುಕೊಳ್ಳುವುದಾದರೆ, ಉಳಿದ ಎರಡು ಸ್ಥಾನಗಳನ್ನೂ ಅವರೇ ಇಟ್ಟುಕೊಳ್ಳಲಿ’ ಎಂದು ವಿಧಾನಪರಿಷತ್‌ ಕಾಂಗ್ರೆಸ್‌ನ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.