ADVERTISEMENT

ವಿಧಾನಸಭೆ ಪ್ರಶ್ನೋತ್ತರ | ಅನ್ನಭಾಗ್ಯ: ಜಮೆ ಆಗದ ₹657 ಕೋಟಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 19:44 IST
Last Updated 29 ಜನವರಿ 2026, 19:44 IST
   

ಬೆಂಗಳೂರು: ರಾಜ್ಯ ಸರ್ಕಾರ ‘ಅನ್ನಭಾಗ್ಯ' ಯೋಜನೆಯಡಿ ಫಲಾನುಭವಿಗಳಿಗೆ 2025ರ ಜನವರಿ ತಿಂಗಳ ಹಣ ಪಾವತಿ ಮಾಡದ ವಿಚಾರ ವಿಧಾನಸಭೆಯಲ್ಲಿ ಗುರುವಾರ ಭಾರಿ ಚರ್ಚೆಗೆ ಕಾರಣವಾಯಿತು.

ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಮಹೇಶ ಟೆಂಗಿನಕಾಯಿ, ‘2025ರ ಜನವರಿ ತಿಂಗಳಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹಣ ಜಮೆ ಆಗಿಲ್ಲ. ರಾಜ್ಯದ ಸುಮಾರು 1.27 ಕೋಟಿ ಪಡಿತರ ಚೀಟಿದಾರರಿಗೆ ಒಟ್ಟು ₹657 ಕೋಟಿ ಪಾವತಿಯಾಗಿಲ್ಲ. ಇಷ್ಟು ದೊಡ್ಡ ಮೊತ್ತದ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ’ ಎಂದು ಆರೋಪಿಸಿದರು.

ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣದ ಕುರಿತ ಚರ್ಚೆಯ ಬೆನ್ನಲ್ಲೇ, ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆ ಬಾಕಿ ಇರುವ ಬಗ್ಗೆ ವಿರೋಧ ಪಕ್ಷಗಳ ಸದಸ್ಯರು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. 

ADVERTISEMENT

ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ಕೊಡಲು ಆರಂಭದ ದಿನಗಳಲ್ಲಿ ಎದುರಾಗಿದ್ದ ಅಕ್ಕಿ ಕೊರತೆ ಬಗ್ಗೆ ವಿವರಿಸಿದ ಮುನಿಯಪ್ಪ, ‘ತನ್ನ ಬಳಿ ದಾಸ್ತಾನು ಇದ್ದರೂ ರಾಜ್ಯಕ್ಕೆ ಅಕ್ಕಿ ನೀಡಲು ಆರಂಭದಲ್ಲಿ ಕೇಂದ್ರ ಸರ್ಕಾರ ನಿರಾಕರಿಸಿತ್ತು. ಹೀಗಾಗಿ, ನಾವು 5 ಕೆ.ಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಫಲಾನುಭವಿಗೆ ₹170 ಅನ್ನು ಡಿಬಿಟಿ ಮೂಲಕ ನೀಡುತ್ತಾ ಬಂದಿದ್ದೇವೆ. 2025ರ ಜನವರಿಯಲ್ಲಿ ಹೆಚ್ಚುವರಿ ಅಕ್ಕಿ ಪೂರೈಸುವುದಾಗಿ ರಾಜ್ಯಕ್ಕೆ ಕೇಂದ್ರ ಪತ್ರ ಬರೆದಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಫೆಬ್ರುವರಿ ತಿಂಗಳಿನಿಂದ ಹಣದ ಬದಲು ಅಕ್ಕಿ ಹಂಚಿಕೆ ಮಾಡಲಾಗುತ್ತಿದೆ. ಜನವರಿ ತಿಂಗಳಿನಿಂದಲೇ ಅಕ್ಕಿ ಕೊಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದರಿಂದ ಹಣ ಜಮೆ ಮಾಡಿಲ್ಲ. 2023ರ ಜುಲೈನಿಂದ 2024-25ರ ಅವಧಿಯವರೆಗೆ ಸಮರ್ಪಕವಾಗಿ ಹಣ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು. 

ಹುದ್ದೆ ಭರ್ತಿ ಶೀಘ್ರ:

ರಾಜ್ಯದ ಖಾಸಗಿ ಅನುದಾನಿತ ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 2016 ಜ.1ರಿಂದ 2020 ಡಿ.31ರವರೆಗೆ ನಿಧನ, ನಿವೃತ್ತಿ, ರಾಜೀನಾಮೆ ಹಾಗೂ ಇತರೆ ಕಾರಣಗಳಿಂದ ಖಾಲಿಯಾದ ಬೋಧಕರ ಹುದ್ದೆಗಳನ್ನು ಮುಂಬರುವ ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲು ಭರ್ತಿ ಮಾಡಲಾಗುವುದು – ಎಸ್‌. ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

ಪ್ರಶ್ನೆ: ಎನ್‌.ಎಚ್‌. ಕೋನರೆಡ್ಡಿ, ಕಾಂಗ್ರೆಸ್‌

ವಿಶೇಷ ಉದ್ಯೋಗ ಮೇಳ

ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಬಲೀಕರಣಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಂಗವಿಕಲರಿಗಾಗಿಯೇ ವಿಶೇಷ ಉದ್ಯೋಗ ಮೇಳವನ್ನು ಮುಂದಿನ ಮೂರು ತಿಂಗಳ ಒಳಗೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು - ಡಾ. ಶರಣಪ್ರಕಾಶ್  ಪಾಟೀಲ್, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ 

ಪ್ರಶ್ನೆ: ಗುರುರಾಜ್‌ ಶೆಟ್ಟಿ ಗಂಟಿಹೊಳೆ, ಬಿಜೆಪಿ

ವೈದ್ಯರ ನೇಮಕ

ವಾರದ 7 ದಿನ, ದಿನದ 24 ತಾಸು ವೈದ್ಯರ ಸೇವೆ ಲಭ್ಯವಿರುವಂತೆ ರಾಜ್ಯದ ಪ್ರತಿ ತಾಲ್ಲೂಕು ಆಸ್ಪತ್ರೆಗೆ ತಲಾ ಇಬ್ಬರು ಸ್ತ್ರೀರೋಗ ತಜ್ಞ ವೈದ್ಯರು, ಮಕ್ಕಳ ವೈದ್ಯರು ಮತ್ತು ಅರಿವಳಿಕೆ ತಜ್ಞರನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು - ದಿನೇಶ್‌ ಗುಂಡೂರಾವ್‌, ಆರೋಗ್ಯ  ಇಲಾಖೆ ಸಚಿವ 

ಪ್ರಶ್ನೆ:  ಸಿಮೆಂಟ್‌ ಮಂಜು, ಬಿಜೆಪಿ

ಶಿಸ್ತು ಕ್ರಮ

ಕಾರ್ಖಾನೆಗಳು-ಉದ್ದಿಮೆಗಳ ತ್ಯಾಜ್ಯ ನೀರನ್ನು ನದಿ-ಹಳ್ಳಕೊಳ್ಳಗಳಿಗೆ ವಿಸರ್ಜಿಸುವ ಕಾರ್ಖಾನೆಗಳ ವಿರುದ್ಧ ಜಲ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ಅಧಿಕಾರಿಗಳು ಸುಳ್ಳು ಉತ್ತರ ಕೊಟ್ಟಿದ್ದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು - ಈಶ್ವರ್‌ ಬಿ. ಖಂಡ್ರೆ, ಅರಣ್ಯ ಸಚಿವ 

ಪ್ರಶ್ನೆ: ಬಿ.ಪಿ.ಹರೀಶ್‌, ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.