ಬೆಂಗಳೂರು: ‘1.73 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಆದಷ್ಟು ಶೀಘ್ರ ವಿತರಿಸಿ, ಪಡಿತರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಹಿಂದಿನ ಸರ್ಕಾರದ ಅವಧಿ ಪೂರ್ಣಗೊಳ್ಳುವ ಹೊತ್ತಿಗೆ ಬಿಪಿಎಲ್ ಕಾರ್ಡ್‌ಗಳಿಗೆ ಸಲ್ಲಿಕೆಯಾಗಿದ್ದ 2.95 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದವು. ಅದರಲ್ಲಿ 2,36,162 ಅರ್ಹರಿದ್ದು, 56,930 ಅರ್ಜಿಗಳು ಬಿಪಿಎಲ್ ವ್ಯಾಪ್ತಿಯಲ್ಲಿ ಇಲ್ಲ. ಅರ್ಹರ ಪೈಕಿ, 62 ಸಾವಿರ ಕಾರ್ಡ್‌ಗಳಿಗೆ ಈಗಾಗಲೇ ಆಹಾರಧಾನ್ಯ ಹಂಚಿಕೆ ಮಾಡಲಾಗುತ್ತಿದೆ’ ಎಂದರು.
‘ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾರೇ ಅರ್ಜಿ ಸಲ್ಲಿಸಿದರೂ ತಕ್ಷಣ ಕಾರ್ಡ್ ಕೊಡಲು ಕ್ರಮ ವಹಿಸಲಾಗುತ್ತದೆ’ ಎಂದರು.
‘ಅಕ್ಕಿ ಖರೀದಿ ದರದಲ್ಲಿ ವ್ಯತ್ಯಾಸವೇಕೆ?’
‘ಅಕ್ಷರ ದಾಸೋಹಕ್ಕೆ ಟೆಂಡರ್ ಮೂಲಕ, ‘ಅನ್ನಭಾಗ್ಯ’ಕ್ಕೆ ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿಸುತ್ತಿರುವುದರಿಂದ ಅಕ್ಕಿ ಖರೀದಿ ದರದಲ್ಲಿ ವ್ಯತ್ಯಾಸವಿದೆ’ ಎಂದು ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದರು.
ಬಿಜೆಪಿಯ ಎನ್. ರವಿಕುಮಾರ್, ‘ಅಕ್ಷರ ದಾಸೋಹಕ್ಕೆ ಕಿಲೋಗೆ ₹29.30ರಂತೆ ಶಿಕ್ಷಣ ಇಲಾಖೆ ಅಕ್ಕಿ ಖರೀದಿಸುತ್ತಿದೆ. ಆದರೆ, ಅನ್ನ ಭಾಗ್ಯದಡಿ ವಿತರಿಸಲು ಆಹಾರ ಇಲಾಖೆ ಕಿಲೋಗೆ ₹34.60ರಂತೆ ಖರೀದಿಸುತ್ತಿದೆ. ದರದಲ್ಲಿ ಈ ವ್ಯತ್ಯಾಸ ಯಾಕೆ? ಹೆಚ್ಚುವರಿ ಹಣ ಎಲ್ಲಿ ಹೋಗುತ್ತಿದೆ’ ಎಂದು ಪ್ರಶ್ನಿಸಿದರು.
ಅದಕ್ಕೆ ಮುನಿಯಪ್ಪ, ‘ಅನ್ನಭಾಗ್ಯಕ್ಕೆ ಹೆಚ್ಚುವರಿ ಅಕ್ಕಿಯನ್ನು ಕೇಂದ್ರ ಕೊಡಲಿಲ್ಲ. ನಾವು ಕೇಂದ್ರ ಸ್ವಾಮ್ಯದ ಸಂಸ್ಥೆಗಳ ಮೂಲಕ ಟೆಂಡರ್ ಆಹ್ವಾನಿಸದೆ ‘ಎ’ ಗ್ರೇಡ್ ಅಕ್ಕಿ ಖರೀದಿಸುತ್ತಿದ್ದೇವೆ’ ಎಂದರು.
ಉತ್ತರಕ್ಕೆ ತೃಪ್ತರಾಗದ ರವಿಕುಮಾರ್, ‘ಅನ್ನಭಾಗ್ಯಕ್ಕೆ ಹೆಚ್ಚಿನ ದರ ನೀಡಿ ‘ಎ’ ಗ್ರೇಡ್ ಖರೀದಿಸಿದರೆ, ಮಕ್ಕಳಿಗೆ ಯಾವ ಗುಣಮಟ್ಟದ ಅಕ್ಕಿ ಖರೀದಿಸಲಾಗುತ್ತಿದೆ’ ಎಂದು ಮರು ಪ್ರಶ್ನೆ ಹಾಕಿದರು. ಅದಕ್ಕೆ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ, ‘ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಅಕ್ಕಿ ಕೊಡಲಾಗುತ್ತಿದೆ. ನಾವು ಟೆಂಡರ್ ಆಹ್ವಾನಿಸಿ ಅಕ್ಕಿ ಖರೀದಿಸುತ್ತಿದ್ದೇವೆ’ ಎಂದರು.
ಸ್ಪಷ್ಟ ಉತ್ತರಕ್ಕೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಸಭಾಪತಿ ಬಸವರಾಜ ಹೊರಟ್ಟಿ, ಈ ವಿಷಯದ ಕುರಿತು ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ವಾಗ್ವಾದಕ್ಕೆ ತೆರೆ ಎಳೆದರು.
‘ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗಿ ಪರೀಕ್ಷೆ, ಚಿಕಿತ್ಸೆ ಉಚಿತ’:
‘ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗಿ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿದ್ದು, ಖಾಸಗಿ ಆಸ್ಪತ್ರೆಗಳ ದರವನ್ನು ಸರ್ಕಾರವೇ ನಿಗದಿಪಡಿಸಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು
ವಿಧಾನ ಪರಿಷತ್ನಲ್ಲಿ ಬಿಜೆಪಿಯ ಧನಂಜಯ ಸರ್ಜಿ ಬದಲು ಡಿ.ಎಸ್. ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗಿ ಕಾಣಿಸಿಕೊಂಡಿದೆ. ಕಳೆದ ಬಾರಿ 25 ಸಾವಿರ ಪ್ರಕರಣ ಇದ್ದರೆ, ಈ ಬಾರಿ 60 ಸಾವಿರ ದಾಟಿದೆ’ ಎಂದರು.
‘ಡೆಂಗಿ ಪ್ರಕರಣದ ಅಂಕಿ ಅಂಶಗಳನ್ನು ಮುಚ್ಚಿಡುತ್ತಿಲ್ಲ. ಗಂಭೀರವಾಗಿ ಪರಿಗಣಿಸಿ, ಕೋವಿಡ್ ರೀತಿಯಲ್ಲಿ ನಿಗಾ ವಹಿಸಲು ಸೂಚಿಸಲಾಗಿದೆ. ಒಂದು ಪ್ರದೇಶದಲ್ಲಿ ಎರಡು ಡೆಂಗಿ ಪ್ರಕರಣ ಕಂಡುಬಂದರೆ, ಆ ಪ್ರದೇಶದಲ್ಲಿ ಜ್ವರ ಕ್ಲಿನಿಕ್ ಆರಂಭಿಸಲಿದ್ದೇವೆ’ ಎಂದರು.
ಆರೋಪಿಗಳ ವಿರುದ್ಧ ‘ಪಿಸಿ ಆ್ಯಂಡ್ ಪಿನ್ ಡಿಟಿ’ ಪ್ರಕರಣ
‘ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಪಿಸಿ ಆ್ಯಂಡ್ ಪಿನ್ ಡಿಟಿ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ. ಉತ್ತಮ ವಕೀಲರನ್ನು ನಿಯೋಜಿಸುವ ಮೂಲಕ ಆರೋಪಿಗಳಿಗೆ ಜಾಮೀನು ಸಿಗದಂತೆ ಮಾಡಲು ಸೂಚಿಸಲಾಗಿದೆ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಮತ್ತು, ಬಿಜೆಪಿಯ ಸಿ.ಟಿ. ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ವಹಿಸಿದ್ದೇವೆ. ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಬೇಕಿದ್ದು, ಆ ಕೆಲಸವನ್ನೂ ಮಾಡುತ್ತಿದ್ದೇವೆ’ ಎಂದರು.
‘ಇಲಾಖೆಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಂಥ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸಿ, ಭಯ ಹುಟ್ಟಿಸಿ ಮಟ್ಟ ಹಾಕಬೇಕು’ ಎಂದು ವೆಂಕಟೇಶ್ ಸಲಹೆ ನೀಡಿದರು.
‘ಜಿಲ್ಲಾ ವೈದ್ಯಾಧಿಕಾರಿಗಳ ಮೂಲಕ ಎಫ್ಐಆರ್ ದಾಖಲಿಸಲಾಗುತ್ತಿದೆ. ಈಗಾಗಲೇ 23 ಆಸ್ಪತ್ರೆಗಳ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಮೈಸೂರಿನ ಮಾತಾ ಆಸ್ಪತ್ರೆ ಪರವಾನಗಿ ರದ್ದು ಮಾಡಿದ್ದೇವೆ’ ಎಂದು ದಿನೇಶ್ ಹೇಳಿದರು.
ರಾಯಚೂರಿನಲ್ಲಿ ಏಮ್ಸ್: ಕೇಂದ್ರದಿಂದ ತಾರತಮ್ಯ ಧೋರಣೆ’
‘ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಸಿದ್ಧವಿದ್ದರೂ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ತೋರಿಸುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅಸಮಾಧಾನ ಹೊರಹಾಕಿದರು.
ಜೆಡಿಎಸ್‍ನ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕರ್ನಾಟಕ ಮತ್ತು ಕೇರಳ ಬಿಟ್ಟು, ಇತರ ಎಲ್ಲ ರಾಜ್ಯಗಳಲ್ಲೂ ಏಮ್ಸ್ ಸ್ಥಾಪಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಮುಖ್ಯಮಂತ್ರಿ, ನಾನು, ಸಂಸದರು, ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಕೇಂದ್ರದ ಆರೋಗ್ಯ ಸಚಿವರನ್ನು ಎರಡು ಬಾರಿ ಭೇಟಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದರು.
ಪಾಟೀಲರ ಮಾತು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು. ಹೀಗಾಗಿ, ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.