ADVERTISEMENT

'ಸೈನಿಕರ ತ್ಯಾಗ, ಬಲಿದಾನ ಸ್ಮರಣೀಯ'

‘ವಿಜಯ ದಿವಸ‘ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 16:30 IST
Last Updated 16 ಡಿಸೆಂಬರ್ 2020, 16:30 IST
ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಬುಧವಾರ ನಡೆದ ‘ವಿಜಯ ದಿವಸ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು– ಪ್ರಜಾವಾಣಿ ಚಿತ್ರ
ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಬುಧವಾರ ನಡೆದ ‘ವಿಜಯ ದಿವಸ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ದೇಶದ ಸೈನಿಕರು ಮಾಡಿದ ತ್ಯಾಗ ಮತ್ತು ಬಲಿದಾನಗಳು ಅವಿಸ್ಮರಣೀಯವಾದುವು. ಸೈನಿಕರ ಸುಖ ಮತ್ತು ದುಃಖಗಳಲ್ಲಿ ಭಾಗಿಯಾಗುವುದು ಎಲ್ಲ ನಾಗರಿಕರ ಕರ್ತವ್ಯ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಪಾಕಿಸ್ತಾನ ಸೇನೆಯ ವಿರುದ್ಧ ಭಾರತೀಯ ಸೇನೆ ಜಯ ಸಾಧಿಸಿದ ನೆನಪಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ವಿಜಯ ದಿವಸ’ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

1971 ರ ಡಿಸೆಂಬರ್‌ 16ರಂದು ಪಾಕಿಸ್ತಾನದ ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಅಮೀರ್‌ ಅಬ್ದುಲ್ಲಾ ಖಾನ್‌ ನಿಯಾಜಿ ಸೇರಿದಂತೆ 91,000 ಸೈನಿಕರು ಭಾರತೀಯ ಸೇನೆ ಮತ್ತು ಮುಕ್ತಿ ವಾಹಿನಿಯನ್ನು ಒಳಗೊಂಡ ಮಿತ್ರಪಡೆಗಳಿಗೆ ಶರಣಾಗಿದ್ದರು. ಆ ಯುದ್ಧದಲ್ಲಿ ಭಾರತದ 3,000 ಸೈನಿಕರು ಹುತಾತ್ಮರಾಗಿದ್ದರು. 10,000 ಮಂದಿ ಗಾಯಗೊಂಡಿದ್ದರು. ಕರ್ನಾಟಕದ 58 ಸೈನಿಕರು ಹುತಾತ್ಮರಾಗಿದ್ದು, 16 ಮಂದಿ ಗಾಯಗೊಂಡು ಅಂಗವಿಕಲರಾಗಿದ್ದರು ಎಂದು ನೆನಪಿಸಿಕೊಂಡರು.

ADVERTISEMENT

ದೇಶದ ಪ್ರಜಾಪ್ರಭುತ್ವ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಸೇನಾಪಡೆಗಳ ಕೊಡುಗೆ ದೊಡ್ಡದು. ಪ್ರತಿಕೂಲ ಹವಾಮಾನ, ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ಪ್ರಾಣವನ್ನೇ ಪಣವಾಗಿಟ್ಟು ದೇಶವನ್ನು ರಕ್ಷಿಸುವ ಅವರ ತ್ಯಾಗ ಸ್ಮರಣೀಯವಾದುದು. ಯೋಧರ ಸುಖ, ದುಃಖಗಳಲ್ಲಿ ಭಾಗಿಯಾಗಬೇಕಾದುದು ಜನರ ಕರ್ತವ್ಯ ಎಂದರು.

ಹುತಾತ್ಮ ಯೋಧರ ಪತ್ನಿಯರಾದ ಪದ್ಮಾ ಸಾಂಗ್ಲಿ, ಸಲ್ಮಾ ಸರ್ವತ್‌, ಲಕ್ಷ್ಮಿ ಪಾಟೀಲ ಮತ್ತು ಹುತಾತ್ಮ ಯೋಧ ಮೇಜರ್‌ ಅಕ್ಷಯ್‌ ಗಿರೀಶ್‌ ಅವರ ತಾಯಿ ಮೇಘನಾ ಗಿರೀಶ್‌ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌, ಗೃಹ ಇಲಾಖೆ ಕಾರ್ಯದರ್ಶಿ ಉಮೇಶ್‌ ಕುಮಾರ್‌, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕ ನಿವೃತ್ತ ಬ್ರಿಗೇಡಿಯರ್‌ ರವಿ ಮುನಿಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.