ADVERTISEMENT

‘ಸಕಾಲ’ದಲ್ಲಿ ವಿಜಯನಗರ ಉತ್ತಮ ಸಾಧನೆ

ಜಿಲ್ಲಾಡಳಿತದ ಪರಿಣಾಮಕಾರಿ ಕ್ರಮಗಳಿಂದ ರಾಜ್ಯದಲ್ಲಿ ಜಿಲ್ಲೆಗೆ 2ನೇ ಸ್ಥಾನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಜೂನ್ 2022, 19:30 IST
Last Updated 3 ಜೂನ್ 2022, 19:30 IST
ಅನಿರುದ್ಧ್‌ ಶ್ರವಣ್‌ ಪಿ.
ಅನಿರುದ್ಧ್‌ ಶ್ರವಣ್‌ ಪಿ.   

ಹೊಸಪೇಟೆ (ವಿಜಯನಗರ): ‘ಸಕಾಲ’ ಯೋಜನೆಯ ಅಡಿಯಲ್ಲಿ ಬರುವ ಅರ್ಜಿಗಳ ವಿಲೇವಾರಿಯಲ್ಲಿ ವಿಜಯನಗರ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದೆ.

ಇಷ್ಟೇ ಇಲ್ಲ, ರಾಜ್ಯದ ಜಿಲ್ಲೆಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಏಪ್ರಿಲ್‌ನಲ್ಲಿ ಜಿಲ್ಲೆ 6ನೇ ಸ್ಥಾನದಲ್ಲಿತ್ತು. ಒಂದು ತಿಂಗಳ ಕಡಿಮೆ ಅಂತರದಲ್ಲಿ ಜಿಲ್ಲೆ ನಾಲ್ಕು ಸ್ಥಾನಗಳನ್ನು ಜಿಗಿತ ಕಂಡಿದೆ. ಉತ್ತರ ಕನ್ನಡ ಮೊದಲ ಸ್ಥಾನದಲ್ಲಿದೆ. ಆದರೆ, ಸಲ್ಲಿಕೆಯಾದ ಒಟ್ಟು ಅರ್ಜಿಗಳ ಸಂಖ್ಯೆಯನ್ನು ಪರಿಶೀಲಿಸಿದಾಗ ಉತ್ತರ ಕನ್ನಡ ಹಾಗೂ ವಿಜಯನಗರ ಜಿಲ್ಲೆಗಳ ನಡುವೆ ಹೆಚ್ಚಿನ ಅಂತರವಿದೆ.

ವಿಜಯನಗರ ಜಿಲ್ಲೆಯಲ್ಲಿ ಒಟ್ಟು 85,022 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 64,408 ವಿಲೇವಾರಿಗೊಳಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 68,050 ಅರ್ಜಿಗಳು ಬಂದಿದ್ದವು. ಇದರಲ್ಲಿ 63,496 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಎರಡೂ ಜಿಲ್ಲೆಗಳ ಒಟ್ಟು ಅರ್ಜಿಗಳನ್ನು ಅವಲೋಕಿಸಿದಾಗ ವಿಜಯನಗರ ಜಿಲ್ಲೆಯಲ್ಲಿ 17 ಸಾವಿರ ಹೆಚ್ಚು ಅರ್ಜಿಗಳು ಬಂದಿದ್ದವು.

ADVERTISEMENT

ಇನ್ನು, ಸೂಕ್ತ ದಾಖಲೆಗಳನ್ನು ಸಲ್ಲಿಸದ ಕಾರಣ 3,684 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಕಾರಣಾಂತರಗಳಿಂದ 630 ಅರ್ಜಿಗಳು ಇನ್ನಷ್ಟೇ ವಿಲೇವಾರಿಗೊಳ್ಳಬೇಕಿದೆ. ಅರ್ಜಿಗಳ ವಿಲೇವಾರಿಯಲ್ಲಿ ಸಂದರ್ಭದಲ್ಲಿ ಹೆಚ್ಚು ಅರ್ಜಿಗಳನ್ನು ತಿರಸ್ಕೃತಗೊಳಿಸಿದರೂ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಜಿಲ್ಲೆಯ ಸ್ಥಾನ ಕುಸಿಯುತ್ತದೆ. ಇದನ್ನೇ ಪ್ರಮುಖ ಮಾನದಂಡವಾಗಿ ಪರಿಗಣಿಸಿರುವುದರಿಂದ ಬೇಕಾಬಿಟ್ಟಿ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ.

ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಬೆಂಗಳೂರು ಗ್ರಾಮೀಣ, ತುಮಕೂರು ಹಾಗೂ ಹಾಸನ ಜಿಲ್ಲೆಗಳು ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ನೆರೆಯ ಜಿಲ್ಲೆ ಬಳ್ಳಾರಿ 30ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ನಗರ, ಪಟ್ಟಿಯಲ್ಲಿ ಕಟ್ಟ ಕಡೆಯ ಸ್ಥಾನ ಪಡೆದಿದೆ.

ಉತ್ತಮ ಸಾಧನೆಗೇನು ಕಾರಣ?:

ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರು ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದ ಸಕಾಲ ಯೋಜನೆಯಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಅರ್ಜಿಗಳ ವಿಲೇವಾರಿ ಸಂಬಂಧ ನಿತ್ಯ ತಹಶೀಲ್ದಾರ್‌ಗಳ ಕಾರ್ಯವೈಖರಿಯನ್ನು ಪರಿಶೀಲಿಸಿ, ಮೇಲಿಂದ ಮೇಲೆ ಸೂಚನೆಗಳನ್ನು ಕೊಡುತ್ತಿದ್ದಾರೆ. ತಹಶೀಲ್ದಾರ್‌ಗಳು ಕೆಳಹಂತದ ಅಧಿಕಾರಿಗಳಿಂದ ತ್ವರಿತ ಗತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ ಜರುಗಿಸುತ್ತಿದ್ದಾರೆ.

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಕಾಲ ಯೋಜನೆಯಡಿ ನಾಡಕಚೇರಿಗಳಿಗೆ ನಿತ್ಯ ಸಲ್ಲಿಕೆಯಾಗುವ ಅರ್ಜಿಗಳ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಅವುಗಳ ವಿಲೇವಾರಿಗೆ ಕೈಗೊಂಡ ಕ್ರಮಗಳ ಬಗ್ಗೆಯೂ ವಿವರ ಪಡೆದುಕೊಂಡು, ಚುರುಕು ಮುಟ್ಟಿಸಿದ ಪರಿಣಾಮ ಸಕಾಲ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಜಿಲ್ಲೆಯ ಸ್ಥಾನ ಮೇಲಕ್ಕೇರಿದೆ. ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳಿಗಾಗಿ ಸಾರ್ವಜನಿಕರು ಸಕಾಲದ ಅಡಿ ಅರ್ಜಿಗಳನ್ನು ಸಲ್ಲಿಸುತ್ತಾರೆ.

ಅಂಕಿ ಅಂಶ

ಮೇ ತಿಂಗಳ ‘ಸಕಾಲ’ ಸಾಧನೆಯ ವಿವರ

85022 ಸ್ವೀಕರಿಸಿದ ಒಟ್ಟು ಅರ್ಜಿಗಳು

64408 ವಿಲೇವಾರಿಗೊಂಡ ಅರ್ಜಿಗಳು

3,684 ತಿರಸ್ಕೃತಗೊಂಡ ಅರ್ಜಿಗಳು

630 ವಿಲೇವಾರಿಗೆ ಬಾಕಿ ಉಳಿದ ಅರ್ಜಿಗಳು


ಮೇ ತಿಂಗಳ ತಾಲ್ಲೂಕುವಾರು ಸಕಾಲ ಪ್ರಗತಿ ವಿವರ

ತಾಲ್ಲೂಕು ಸಲ್ಲಿಕೆಯಾದ ಅರ್ಜಿ ವಿಲೇವಾರಿಗೊಂಡ ಅರ್ಜಿ ತಿರಸ್ಕೃತ ಅರ್ಜಿ

ಹೊಸಪೇಟೆ;21870; 18930; 851

ಹರಪನಹಳ್ಳಿ;18666;14341;975

ಹಗರಿಬೊಮ್ಮನಹಳ್ಳಿ;15428;8095;479

ಕೂಡ್ಲಿಗಿ; 11814;8902;383

ಕೊಟ್ಟೂರು; 2902; 2539; 172

ಹೂವಿನಡಹಗಲಿ; 14342; 11601; 824

ನಗರಸಭೆಯಲ್ಲಿ ಸುಧಾರಣೆಗೆ ಕ್ರಮ:ನಗರಸಭೆಯಲ್ಲಿ ಫಾರಂ ನಂಬರ್‌ 3 ಸೇರಿದಂತೆ ಇತರೆ ಸೇವೆಗಳು ಸಾರ್ವಜನಿಕರಿಗೆ ಸಕಾಲದಲ್ಲಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗಂಭೀರವಾಗಿದೆ.

ಸಕಾಲಕ್ಕೆ ಯಾವುದೇ ಅರ್ಜಿಗಳು ವಿಲೇವಾರಿ ಆಗುವುದಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿರುವುದರಿಂದ ಅಲ್ಲಿ ಸುಧಾರಣೆ ತರಲು ಜಿಲ್ಲಾಡಳಿತ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.