ADVERTISEMENT

ಹೊಸ ಕೆರೆ ನಿರ್ಮಿಸಲು ₹550 ಕೋಟಿ ಅನುದಾನಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:23 IST
Last Updated 3 ಜುಲೈ 2025, 15:23 IST
ಡಿ.ಕೆ. ಶಿವಕುಮಾರ್ ಜೊತೆ ಎಂ.ಬಿ. ಪಾಟೀಲ ಚರ್ಚೆ ನಡೆಸಿದರು
ಡಿ.ಕೆ. ಶಿವಕುಮಾರ್ ಜೊತೆ ಎಂ.ಬಿ. ಪಾಟೀಲ ಚರ್ಚೆ ನಡೆಸಿದರು   

ಬೆಂಗಳೂರು: ‘ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತ್ತು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ನೀರಾವರಿ ಮತ್ತು ಕುಡಿಯುವ ನೀರು ಪೂರೈಸುವ ತುಬುಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಡಿಯಲ್ಲಿ ಬಾಬಾನಗರದ ಬಳಿ ಹೊಸದಾಗಿ ಕೆರೆ ನಿರ್ಮಿಸಲು ₹550 ಕೋಟಿ ಅನುದಾನ ನೀಡುವಂತೆ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಮನವಿ ಸಲ್ಲಿಸಿದರು.

ಸದಾಶಿವನಗರದಲ್ಲಿರುವ ನಿವಾಸದಲ್ಲಿ ಶಿವಕುಮಾರ್‌ ಅವರನ್ನು ಗುರುವಾರ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ‘ತುಬುಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಲ್ಲಿ 6.3 ಟಿಎಂಸಿ ಅಡಿ ನೀರನ್ನು ಈ ಎಲ್ಲ ತಾಲ್ಲೂಕುಗಳ 1.30 ಲಕ್ಷ ಎಕರೆಗೆ ಹರಿಸಲಾಗುತ್ತಿದೆ. ಇಲ್ಲಿ ಶೇ 60ರಷ್ಟು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದೆ. ಅದನ್ನು ಬಗೆಹರಿಸಲು ಬಾಬಾನಗರದ ಸಮೀಪ ಕೆರೆ ಕಟ್ಟಿ, 0.775 ಟಿಎಂಸಿ ಅಡಿ ನೀರನ್ನು ತುಂಬಲು ಅವಕಾಶವಿದೆ. ಇಲ್ಲಿ 679.25 ಎಕರೆ ಸರ್ಕಾರಿ ಜಮೀನಿದ್ದು, ಈ ಪೈಕಿ 434 ಎಕರೆಯಲ್ಲಿ ಕೆರೆ ಕಟ್ಟಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ’ ಎಂದು ವಿವರಿಸಿದರು.

‘₹556.5 ಕೋಟಿ ವೆಚ್ಚದಲ್ಲಿ ಹೊಸ ಕೆರೆ ನಿರ್ಮಿಸಲು ಚಿಂತಿಸಲಾಗಿದೆ. ಈ ನೀರನ್ನು ಬೇಸಿಗೆ ಕಾಲದಲ್ಲಿ ಜನ, ಜಾನುವಾರು ಮತ್ತು ಬೆಳೆಗಳಿಗೆ ಉಪಯೋಗಿಸಿಕೊಳ್ಳಬಹುದು. ಇದಕ್ಕೆ ತುಬುಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಎರಡನೆಯ ವಿತರಣಾ ತೊಟ್ಟಿಯಿಂದ ನೀರು ಹರಿಸಲು ಅವಕಾಶವಿದೆ. ಈ ಯೋಜನೆಗೆ ಜಲಸಂಪನ್ಮೂಲ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.