ADVERTISEMENT

ವಿಜಯಪುರ ಪ್ರವೇಶ ನಿರ್ಬಂಧ ಪ್ರಶ್ನಿಸಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 9:35 IST
Last Updated 17 ಅಕ್ಟೋಬರ್ 2025, 9:35 IST
<div class="paragraphs"><p>ಕಾಡಸಿದ್ದೇಶ್ವರ ಸ್ವಾಮೀಜಿ, ಹೈಕೋರ್ಟ್</p></div>

ಕಾಡಸಿದ್ದೇಶ್ವರ ಸ್ವಾಮೀಜಿ, ಹೈಕೋರ್ಟ್

   

ಬೆಂಗಳೂರು: ‘ಲಿಂಗಾಯತ ಮಠಾಧಿಪತಿಗಳ ವಿರುದ್ಧ ಆಕ್ಷೇಪಾರ್ಹ ನುಡಿಗಳನ್ನು ಆಡಿದ್ದಾರೆ’ ಎಂಬ ಹಿನ್ನೆಲೆಯಲ್ಲಿ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ಇದೇ 16ರಿಂದ ಡಿಸೆಂಬರ್ 14ರವರೆಗೆ ವಿಜಯಪುರ ಜಿಲ್ಲೆ ಪ್ರವೇಶಿಸಬಾರದು ಎಂಬ ವಿಜಯಪುರ ಜಿಲ್ಲಾಧಿಕಾರಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ಸ್ವಾಮೀಜಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಶುಕ್ರವಾರ ಪ್ರಕಟಿಸಿತು.

ADVERTISEMENT

‘ಸ್ವಾಮೀಜಿ ಹಿತದೃಷ್ಟಿಯಿಂದಲೇ ಅವರ ವಿಜಯಪುರ ಜಿಲ್ಲೆಯ ಭೇಟಿಯನ್ನು ಪ್ರತಿಬಂಧಿಸಲಾಗಿದೆ’ ಎಂದು ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಮಂಡಿಸಿದ್ದ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಜಿಲ್ಲಾಧಿಕಾರಿ ಆದೇಶ ಏಕಪಕ್ಷೀಯವಾಗಿಲ್ಲ. ಸಾರ್ವಜನಿಕ ಶಾಂತಿ ಕಾಪಾಡುವ ದಿಸೆಯಲ್ಲಿ ಗುಪ್ತಚರ ಮತ್ತು ಪೊಲೀಸ್ ವರದಿಗಳನ್ನು ಆಧರಿಸಿಯೇ ಅನುಷ್ಠಾನಗೊಂಡಿದೆ’ ಎಂಬ ವಾದಾಂಶವನ್ನು ಮನ್ನಿಸಿದೆ. 

‘ಸಂಭಾವ್ಯ ಅಶಾಂತಿಯನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿಬಂಧಕ ಆದೇಶ ಹೊರಡಿಸಲಾಗಿದೆ ಎಂಬ ಸರ್ಕಾರದ ವಾದವನ್ನು ಈ ಹಂತದಲ್ಲಿ ಪರಿಗಣಿಸಬೇಕಾಗುತ್ತದೆ. ಹಾಗಾಗಿ, ಅರ್ಜಿದಾರರು ಜಿಲ್ಲೆಗೆ ಭೇಟಿ ನೀಡುವುದರಿಂದ ದೂರವಿದ್ದರೆ ಅವರ ಅನುಯಾಯಿಗಳಿಗೆ ಉದಾತ್ತ ಮಾದರಿಯನ್ನು ಪ್ರದರ್ಶಿಸಿದಂತಾಗುತ್ತದೆ’ ಎಂದು ತಿಳಿಸಿದೆ.

‘ಆಧ್ಯಾತ್ಮಿಕ ನಾಯಕ ಎನಿಸಿಕೊಂಡವರು ಇತರರಿಗಿಂತಲೂ ಹೆಚ್ಚಾಗಿ ಸಹಿಷ್ಣುತೆ ಮತ್ತು ಸ್ವಯಂ ನಿಯಂತ್ರಿತ ಸಂಯಮವನ್ನು ಪ್ರದರ್ಶಿಸಬೇಕು. ಸಮುದಾಯಗಳಲ್ಲಿ ಸಾಮರಸ್ಯ ಮತ್ತು ಪರಸ್ಪರ ಗೌರವ ಉತ್ತೇಜಿಸಲು ವೈಯಕ್ತಿಕ ಕುಂದುಕೊರತೆಗಳನ್ನು ಮೀರಿ ನಿಲ್ಲಬೇಕು ಎಂಬುದನ್ನು ಎಲ್ಲರೂ ನಿರೀಕ್ಷಿಸುತ್ತಾರೆ. ಹಾಗಾಗಿ, ಸಂವಿಧಾನದ 19(1)(ಡಿ) ವಿಧಿಯಡಿ ಖಾತರಿಪಡಿಸಲಾದ ಹಕ್ಕನ್ನು ಪ್ರತ್ಯೇಕವಾಗಿ ನೋಡಲು ಆಗುವುದಿಲ್ಲ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಬಸವನ ಬಾಗೇವಾಡಿಯಲ್ಲಿ ನಡೆಯುತ್ತಿದ್ದ ಸಮರ್ಥ ಸದ್ಗುರು ಶ್ರೀ ಸಿದ್ದರಾಮೇಶ್ವರ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಶುಕ್ರವಾರ (ಅ.17) ಭಾಗವಹಿಸಬೇಕಿತ್ತು.

ಏನಿದು ಪ್ರಕರಣ?:

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪ್ರಸಿದ್ಧ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಇದೇ 7ರಂದು ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬೀಳೂರು ಗ್ರಾಮದ ಸಮಾರಂಭವೊಂದರಲ್ಲಿ ಮಾತನಾಡಿದ್ದರು.

ಈ ವೇಳೆ ಅವರು, ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು, ಕಲಾವಿದರಿಂದ ಕೂಡಿದ ಮುಖ್ಯಮಂತ್ರಿಗಳ ಕೃಪಾಪೋಷಿತ ನಾಟಕ ಮಂಡಳಿ. ಇವರು ಬಸವ ಸಂಸ್ಕೃತಿ ಅಭಿಯಾನ ಎಂಬ ನಾಟಕವನ್ನು ತೆಗೆದುಕೊಂಡು ಕರ್ನಾಟಕದಾದ್ಯಂತ ತಿರುಗಾಡಿ; ದೇವರು ಗುಡ್ಯಾಗ ಇಲ್ಲ. ಗುಡೀಗೆ ಹೋಗಬ್ಯಾಡ್ರಿ, ಮನ್ಯಾಗಿನ ದೇವರುಗಳನ್ನು ತಗೊಂಡು ಹೊಳ್ಯಾಗ ಹಾಕ್ರಿ. ಹೋಟೆಲ್‌ದಾಗ ಹೋಗಿ ದಾರು ಕುಡೀರಿ. ಆರಾಮಾಗಿರಿ, ಮಾಂಸ ತಿನ್ರಿ... ಎಂದೆಲ್ಲಾ ಜನರಿಗೆ ಹೇಳುತ್ತಿದ್ದಾರೆ’ ಎಂದು ಆಕ್ಷೇಪಿಸಿದ್ದರು.

ಲಿಂಗಾಯತ ಮಠಾಧಿಪತಿಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಬಳಸಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಸ್ವಾಮೀಜಿಯವರು ಜಿಲ್ಲೆಗೆ ಪ್ರವೇಶಿಸುವುದನ್ನು ಪ್ರತಿಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.