ಸಿದ್ದರಾಮಯ್ಯ
ಬೆಂಗಳೂರು: ‘ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ–ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಯೋಜನೆಯನ್ನು ಕೈಬಿಟ್ಟು, ಸರ್ಕಾರದಿಂದಲೇ ಕಾಲೇಜು ಸ್ಥಾಪಿಸಬೇಕು’ ಎಂದು ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರ ನೇತೃತ್ವದಲ್ಲಿ ಸಮಿತಿಯ ಮುಂದಾಳುಗಳಿದ್ದ ನಿಯೋಗವು ಮುಖ್ಯಮಂತ್ರಿ ಅವರನ್ನು ವಿಧಾನಸೌಧದಲ್ಲಿ ಬುಧವಾರ ಭೇಟಿ ಮಾಡಿ, ಮನವಿ ಸಲ್ಲಿಸಿತು.
‘ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿದರೆ, ಜಿಲ್ಲಾಸ್ಪತ್ರೆಯ ಖಾಸಗೀಕರಣಕ್ಕೆ ದಾರಿಯಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಆವರಣದಲ್ಲಿ 153 ಎಕರೆಯಷ್ಟು ಜಾಗವಿದೆ. ಕಾಲೇಜು ಸ್ಥಾಪನೆಯಲ್ಲಿ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲ. ಹೀಗಾಗಿ ಪಿಪಿಪಿ ಮಾದರಿಯನ್ನು ಕೈಬಿಡಬೇಕು’ ಎಂದು ಸಮಿತಿಯು ಒತ್ತಾಯಿಸಿದೆ.
‘ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ಆರಂಭಿಸಿದರೆ, ಸಾರ್ವಜನಿಕ ಆಸ್ತಿಗಳು ಖಾಸಗಿಯವರ ಪಾಲಾಗುವ ಅಪಾಯವಿದೆ. ಇದನ್ನು ತಪ್ಪಿಸಬೇಕು’ ಎಂದೂ ಸಮಿತಿಯು ಒತ್ತಾಯಿಸಿದೆ. ಸಮಿತಿಯ ಪರವಾಗಿ ಸಿದ್ದನಗೌಡ ಪಾಟೀಲ, ಲಲಿತಾ ಬಿಜ್ಜರಗಿ, ಅನಿಲ ಹೊಸಮನಿ, ಅಕ್ರಂ ಮಶಾಲ್ಕರ್, ಫಯಾಜ್ ಕಲಾದಗಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.