ADVERTISEMENT

ಸಮೀಕ್ಷೆಗೆ ನಮ್ಮ ವಿರೋಧವಿಲ್ಲ; ಇಚ್ಛಾಶಕ್ತಿಯ ಬಗ್ಗೆ ಅನುಮಾನವಿದೆ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:27 IST
Last Updated 30 ಸೆಪ್ಟೆಂಬರ್ 2025, 6:27 IST
<div class="paragraphs"><p>ಬಿ.ವೈ.ವಿಜಯೇಂದ್ರ</p></div>

ಬಿ.ವೈ.ವಿಜಯೇಂದ್ರ

   

ಕಲಬುರಗಿ: ‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ವಿರೋಧವಿಲ್ಲ. ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಬಗ್ಗೆ ನಮಗೆ ಗೊಂದಲವಿದೆ. ರಾಜ್ಯದ ಜನರಿಗೆ ಅನುಮಾನವಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಈ ಸಮೀಕ್ಷೆ ಹೆಸರಲ್ಲಿ ಪಗಡೆ ಆಟವಾಡುತ್ತಿದೆ. ಹಿಂದೂ ಸಮಾಜ ಒಡೆಯುವ ಕೆಲಸಕ್ಕೆ ಕೈಹಾಕಿದೆ’ ಎಂದು ಟೀಕಿಸಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಸಮೀಕ್ಷೆ ನಡೆಸುತ್ತಿದ್ದಾರೋ ಅಥವಾ ಪ್ರಾಮಾಣಿಕವಾಗಿ ಹಿಂದುಳಿದ, ಶೋಷಿತ ಸಮುದಾಯಗಳ ನ್ಯಾಯ ಒದಗಿಸಲು ಇದನ್ನು ನಡೆಸುತ್ತಿದ್ದಾರೋ ತಿಳಿಯುತ್ತಿಲ್ಲ. ಅದರಲ್ಲಿ ಸರ್ಕಾರದ ಪ್ರಾಮಾಣಿಕ ಕಳಕಳಿ ನಮಗೂ ಕಾಣುತ್ತಿಲ್ಲ. ಜನರಿಗೂ ಕಾಣುತ್ತಿಲ್ಲ’ ಎಂದು ಟೀಕಿಸಿದರು.

‘ಸ್ವಾತಂತ್ರ್ಯದ ನಂತರ ಕೇಂದ್ರ ಸರ್ಕಾರ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡು ಜನಗಣತಿ ಜೊತೆಗೆ ಜಾತಿಗಣತಿಗೂ ಮುಂದಾಗಿದೆ. ಹಿಂದೆ ಯುಪಿಎ ಸರ್ಕಾರ ಈ ಬಗೆಗೆ ನಿರ್ಧರಿಸಿದ್ದರೂ, ರಾಹುಲ್‌ ಗಾಂಧಿ ಅವರೇ ಅದನ್ನು ವಿರೋಧಿಸಿದ್ದರು’ ಎಂದರು.

‘ಕ್ರಿಶ್ಚಿಯನ್‌ ಲಿಂಗಾಯತರು, ಜೈನ ಪಂಚಮಸಾಲಿಗಳು ಇದ್ದಾರಾ?’

‘ರಾಜ್ಯದಲ್ಲಿ ಕ್ರಿಶ್ಚಿಯನ್‌ ಲಿಂಗಾಯತರು, ಜೈನ ಪಂಚಮಸಾಲಿಗಳು ಇದ್ದಾರಾ, ಕ್ರಿಶ್ಚಿಯನ್ ದಲಿತರು ಇದ್ದಾರಾ’ ಎಂದು ಸಂಸದ ಗೋವಿಂದ ಕಾರಜೋಳ ಪ್ರಶ್ನಿಸಿದರು.

‘ಯಾವುದೇ ವ್ಯಕ್ತಿ ಒಮ್ಮೆ ಧರ್ಮಾಂತರವಾಗುವುದು ಅವರ ಹಕ್ಕು. ಆದರೆ, ಧರ್ಮಾಂತರವಾದ ದಿನದಿಂದಲೇ ಅವರ ಪೂರ್ವಾಶ್ರಮದ ಹಂಗುಗಳೆಲ್ಲ ತೊರೆದು ಹೋಗುತ್ತವೆ. ಆ ವ್ಯಕ್ತಿ ಕ್ರಿಶ್ಚಿಯನ್‌ ಆಗಿದ್ದರೆ, ಕ್ರಿಶ್ಚಯನ್‌ ಧರ್ಮ, ಇಸ್ಲಾಂಗೆ ಧರ್ಮಾಂತರ ಆಗಿದ್ದರೆ ಇಸ್ಲಾಂ ಧರ್ಮದವರಾಗುತ್ತಾರೆ’ ಎಂದರು.

‘ಈ ಸರ್ಕಾರಕ್ಕೆ ಹಿಂದುಳಿದವರು, ದಲಿತರ ಬಗೆಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ₹180 ಕೋಟಿ ವೆಚ್ಚ ಮಾಡಿ ತಯಾರಿಸಿದ ಕಾಂತರಾಜು ವರದಿ ಯಾಕೆ ಕಸದ ಬುಟ್ಟಿಗೆ ಎಸೆದರು? ಗೋಪ್ಯವಾಗಿ ಇಡಬೇಕಿದ್ದ ವರದಿಯನ್ನು ಸೋರಿಕೆ ಮಾಡಿದ್ದರು ಯಾರು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.