ಪರೀಕ್ಷೆ
ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿಗಾಗಿ ಇದೇ ಭಾನುವಾರ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಯಾವ ಅಕ್ರಮಗಳೂ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.
ಈ ಸಂಬಂಧ ಅವರು ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳ ಜತೆಗೆ ಗುರುವಾರ ವಿಡಿಯೊ ಸಂವಾದ ನಡೆಸಿ ಸೂಚನೆಗಳನ್ನು ನೀಡಿದರು.
ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ನಡೆದ ಅಕ್ರಮ ಇಡೀ ವ್ಯವಸ್ಥೆಯೇ ತಲೆ ತಗ್ಗಿಸುವಂತಹ ಕೃತ್ಯವಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳ ಪರೀಕ್ಷೆಯಲ್ಲಿ ಇಂತಹ ಯಾವುದೇ ಅಕ್ರಮಗಳಿಗೂ ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಸಚಿವರು ತಾಕೀತು ಮಾಡಿದರು.
ಈ ಬಾರಿ ಒಟ್ಟು 4.71 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ಹಿಂದೆ ಮೂರು ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಈ ವರ್ಷ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಅಧಿಕವಾಗಿದೆ. ಪರೀಕ್ಷೆ ನ್ಯಾಯೋಚಿತವಾಗಿ ನಡೆಸಬೇಕು. ಕೆಲವು ಜಿಲ್ಲೆಗಳಲ್ಲಿ ಕನಿಷ್ಠ 40 ಕೇಂದ್ರಗಳಲ್ಲಿ ಪರೀಕ್ಷೆ ನಡೆದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ 86 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
‘ಪ್ರಶ್ನೆಪತ್ರಿಕೆಗಳು ಜಿಲ್ಲಾ ಖಜಾನೆಯಲ್ಲಿದ್ದಾಗ ಅಥವಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಸಾಗುವ ದಾರಿಯಲ್ಲೇ ಸೋರಿಕೆಯಾದ ಹಲವು ಪ್ರಕರಣಗಳು ನಮ್ಮ ಮುಂದಿವೆ. ಆದರೆ, ಈ ವರ್ಷ ಯಾವುದೇ ಕಾರಣಕ್ಕೂ ಪ್ರಶ್ನೆಪತ್ರಿಕೆ ಸೋರಿಕೆ ಆಗಲು ಅವಕಾಶ ನೀಡಬಾರದು. ಪೊಲೀಸ್ ಇಲಾಖೆ ಬಿಗಿ ಭದ್ರತೆ ಒದಗಿಬೇಕು’ ಎಂದು ಅವರು ಸೂಚಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸುವ ಪ್ರತಿಯೊಬ್ಬ ಅಭ್ಯರ್ಥಿಯನ್ನೂ ಮೈಕ್ರೋ ಡಿಟೆಕ್ಟ್ ಮೂಲಕ ಪರೀಕ್ಷಿಸಬೇಕು. ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳನ್ನು ಸೂಕ್ಷ್ಮ ಜಿಲ್ಲೆಗಳು ಎಂದು ಗುರುತಿಸಿದ್ದು, ಈ ಭಾಗದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಬೇಕು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.