ADVERTISEMENT

ಗ್ರಾಮ ಸಹಾಯಕರಿಗೆ ₹10 ಲಕ್ಷ ಇಡುಗಂಟು: ಸಚಿವ ಸಂಪುಟ ಸಭೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 15:38 IST
Last Updated 25 ಸೆಪ್ಟೆಂಬರ್ 2025, 15:38 IST
<div class="paragraphs"><p> ಸಚಿವ ಸಂಪುಟ ಸಭೆ</p></div>

ಸಚಿವ ಸಂಪುಟ ಸಭೆ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಅಥವಾ ಸೇವೆಯಲ್ಲಿರುವಾಗಲೇ ಮೃತರಾದರೆ ₹10 ಲಕ್ಷಗಳ ಇಡುಗಂಟು ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ADVERTISEMENT

ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಅಲ್ಲದೇ, ಸೇವೆಯನ್ನು ಗ್ರೂಪ್‌ ‘ಡಿ’ ಹುದ್ದೆಯಲ್ಲಿ ಸಕ್ರಮಗೊಳಿಸುವುದು ಅಥವಾ ಗೌರವ ಧನವನ್ನು ₹15,000 ದಿಂದ ₹27,000ಕ್ಕೆ ಹೆಚ್ಚಿಸುವುದು, ಇವೆರಡಲ್ಲಿ ಒಂದು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಬಾಡಿಗೆ ಮಸೂದೆಗೆ ಒಪ್ಪಿಗೆ:

ಕೇಂದ್ರ ಸರ್ಕಾರವು ‘ಜನ ವಿಶ್ವಾಸ’ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದನ್ನು ರಾಜ್ಯದಲ್ಲಿ ಜಾರಿಗೆ ತರಲು ಕರ್ನಾಟಕ ಬಾಡಿಗೆ ಕಾಯ್ದೆ 1999ರ ವಿವಿಧ ಕಲಂಗಳ ಅಡಿಯಲ್ಲಿ ದಂಡ ಮತ್ತು ಅಪರಾಧ ನಿಬಂಧನೆಗಳಿಗೆ ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.

ಇದು ಕೈಗಾರಿಕಾ ಕಟ್ಟಡಗಳು ಮತ್ತು ಶೆಡ್‌ಗಳ ಬಾಡಿಗೆ ಸಂಬಂಧಿಸಿದ್ದಾಗಿದೆ. ಈ ತಿದ್ದುಪಡಿ ಮಸೂದೆಯನ್ನು ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಾಗುವುದು. ಈ ತಿದ್ದುಪಡಿ ಮೂಲಕ ದಂಡ ಪ್ರಮಾಣವನ್ನು ತರ್ಕಬದ್ಧಗೊಳಿಸಲಾಗುವುದು ಎಂದು ಪಾಟೀಲ ಹೇಳಿದರು.

ಮುಖ್ಯವಾಗಿ ವಿವಿಧ ಅಪರಾಧದ ಪ್ರಕರಣಗಳನ್ನು ಅಪರಾಧವಲ್ಲ ಎಂದು ನಿರ್ಣಯಿಸುವುದು, ವಿವಿಧ ರೀತಿಯ ದಂಡಗಳನ್ನು ಪರಿಷ್ಕರಿಸುವುದು, ನ್ಯಾಯಾಂಗ ಅಧಿಕಾರಿಯನ್ನು ನೇಮಿಸುವುದು, ಮೇಲ್ಮನವಿ ಘಟಕದ ಸ್ಥಾಪನೆ ಮತ್ತು ದಂಡ ಪ್ರಮಾಣವನ್ನು ಕಾಲ ಕಾಲಕ್ಕೆ ಹೆಚ್ಚಿಸುವ ಅಂಶವನ್ನು ತಿದ್ದುಪಡಿ ಒಳಗೊಂಡಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.