ADVERTISEMENT

ಜಿಲ್ಲಾಧಿಕಾರಿಗಳು, ಕಂದಾಯ ಅಧಿಕಾರಿಗಳಿಗೆ ಗ್ರಾಮ ವಾಸ್ತವ್ಯ ಕಡ್ಡಾಯ– ಸಚಿವ ಅಶೋಕ

ಫೆ. 3ರಿಂದ ಮೂರು ದಿನ ‘ಏರೋ ಇಂಡಿಯಾ–2021’ ಪ್ರದರ್ಶನಕ್ಕೆ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 8:16 IST
Last Updated 21 ಜನವರಿ 2021, 8:16 IST
ಸಚಿವ ಆರ್. ಅಶೋಕ: ಸಂಗ್ರಹ ಚಿತ್ರ
ಸಚಿವ ಆರ್. ಅಶೋಕ: ಸಂಗ್ರಹ ಚಿತ್ರ   

ಬೆಂಗಳೂರು: ‘ಕೋವಿಡ್ ಕಾರಣದಿಂದ ‘ಹಳ್ಳಿಗೆ ನಡೆಯಿರಿ ಜಿಲ್ಲಾಧಿಕಾರಿಗಳೇ’ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತ್ತು. ಈಗ ಆ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲಾಗುತ್ತಿದೆ. ಪ್ರತಿ ತಿಂಗಳ ಮೂರನೆ ಶನಿವಾರ ಎಲ್ಲ ಜಿಲ್ಲಾಧಿಕಾರಿಗಳಿಗೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮ ವಾಸ್ತವ್ಯ ಕಡ್ಡಾಯಗೊಳಿಸಲಾಗಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಇದು ನನ್ನ ಕನಸಿನ ಯೋಜನೆ. ಹಳ್ಳಿ ಜನರ ಸಮಸ್ಯೆ ಆಲಿಸುವ ಉದ್ದೇಶದಿಂದ ಈ ‌ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಫೆ. 3ರಿಂದ ಏರೋ ಇಂಡಿಯಾ: ‘ಫೆ. 3ರಿಂದ 5ರವರೆಗೆ ಮೂರು ದಿನ ಏರೋ ಇಂಡಿಯಾ - 2021 ನಡೆಯಲಿದೆ. 14 ರಾಷ್ಟ್ರಗಳ 551 ಪ್ರದರ್ಶನದ ಕೇಂದ್ರ, 61 ವಿಮಾನಗಳ ಪ್ರದರ್ಶನ ನಡೆಯಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಕಳೆದ ಬಾರಿ ಪ್ರದರ್ಶನದ ಬಳಿ ವಾಹನ ಪಾರ್ಕಿಂಗ್‌ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು. ಈ ಬಾರಿ, ಆ ಘಟನೆ ಮರುಕಳಿಸದಂತೆ ಮಾರ್ಗಸೂಚಿ ಹೊರಡಿಸಲಾಗಿದೆ. ಎಲ್ಲ ಇಲಾಖೆಗಳ ಸಮನ್ವಯತೆ ಬಳಿಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ’ ಎಂದರು.

‘ಜನ ಸಾಮಾನ್ಯರ ರಕ್ಷಣೆ, ಜನರ ಸ್ಥಳಾಂತರ, ಆಸ್ತಿ ಸಂರಕ್ಷಣೆ ಎಲ್ಲವೂ ಇದರಲ್ಲಿ ಈ ಮಾರ್ಗಸೂಚಿಯಲ್ಲಿದೆ. ಒಳಾಂಗಣ ಹಾಗೂ ಹೊರಾಂಗಣ ವಿಪತ್ತು ನಿರ್ವಹಣೆಗೂ ಮಾರ್ಗಸೂಚಿ ಇದೆ’ ಎಂದು ಅವರು ವಿವರಿಸಿದರು.

ಮುಖ್ಯಮಂತ್ರಿ ಎಲ್ಲರಿಗೂ ಉತ್ತಮ ಖಾತೆ ಕೊಟ್ಟಿದ್ದಾರೆ: ಖಾತೆ ಬದಲಾವಣೆಯಿಂದ ಕೆಲವು ಸಚಿವರು ಅಸಮಾಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲರನ್ನೂ ತೃಪ್ತಿಪಡಿಸಲು ದೇವರಿಂದಲೂ ಸಾಧ್ಯವಿಲ್ಲ. ಮುಖ್ಯಮಂತ್ರಿ ಎಲ್ಲರಿಗೂ ಉತ್ತಮವಾದ ಖಾತೆಗಳನ್ನು ಕೊಟ್ಟಿದ್ದಾರೆ’ ಎಂದರು.

‘ನಾನು ಬೆಳಿಗ್ಗೆ ಗೋಪಾಲಯ್ಯ, ಎಂಟಿಬಿ ನಾಗರಾಜ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ರಾಜೀನಾಮೆ ಕೊಡುವಷ್ಟರ ರೀತಿಯ ಅಸಮಾಧಾನ ಮಾಧುಸ್ವಾಮಿ ಅವರಿಗೆ ಇಲ್ಲ’ ಎಂದರು.

‘ಮುಖ್ಯಮಂತ್ರಿ ಜೊತೆ ನಾವೆಲ್ಲರೂ ಇದ್ದೇವೆ. ಇಂತಹದ್ದೇ ಖಾತೆ ಬೇಕು ಎಂದು ನಾನು ಕೇಳಿಲ್ಲ. ನಾನು ಈ ಹಿಂದೆ ಗೃಹ ಖಾತೆ ನಿಭಾಯಿಸಿದ್ದೇನೆ. ಖಾತೆ ಬದಲಾವಣೆ ಮುಖ್ಯಮಂತ್ರಿಯ ಪರಮಾಧಿಕಾರ. ಅಸಮಾಧಾನ ಇರುವವರ ಜೊತೆ ಮುಖ್ಯಮಂತ್ರಿ ಕುಳಿತು ಚರ್ಚಿಸಲಿದ್ದಾರೆ’ ಎಂದರು.

‘ಯಡಿಯೂರಪ್ಪ ಇದೇ ಮೊದಲ ಬಾರಿ ಮುಖ್ಯಮಂತ್ರಿ ಆದವರಲ್ಲ. ನಾಲ್ಕು ಬಾರಿ ಮುಖ್ಯಮಂತ್ರಿ ಆಗಿರುವವರು. ಖಾತೆ ಕ್ಯಾತೆ ಸರ್ವೇ ಸಾಮಾನ್ಯ. ಮುಖ್ಯಮಂತ್ರಿ ಅಳೆದು ತೂಗಿ ಖಾತೆ ಹಂಚಿಕೆ ಮಾಡಿದ್ದಾರೆ. ಯಾರಿಗೆ ಯಾವ ಖಾತೆ ಕೊಡಬೇಕೊ ಅದನ್ನು ಕೊಟ್ಟಿದ್ದಾರೆ’ ಎಂದು ಸಮರ್ಥನೆ ನೀಡಿದರು.

ಸಮರ್ಥ ವಿರೋಧ ಪಕ್ಷ ಇಲ್ಲ: ‘ರಾಜ್ಯದಲ್ಲಿ ಸಮರ್ಥವಾದ ವಿರೋಧ ಪಕ್ಷವೇ ಇಲ್ಲ. ಕಾಂಗ್ರೆಸ್ ಅಧಿಕಾರ ನಡೆಸಿದ‌ ಸಂದರ್ಭದಲ್ಲಿ ವೀರಪ್ಪ ಮೊಯಿಲಿಯವರ ಬಟ್ಟೆ ಹರಿದು ಹಾಕಿ ಓಡಿಸಿದ್ದರು. ತಮ್ಮ ತಟ್ಟೆಯಲ್ಲಿ ಹೆಗ್ಗಣವಿದ್ದರೂ ನಮ್ಮ ತಟ್ಟೆಯ ನೊಣ ತೋರಿಸುವ ಯತ್ನವನ್ನು ಕಾಂಗ್ರೆಸ್‌ ನಾಯಕರು ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ರೈತರಪರ ಕಾಂಗ್ರೆಸ್‌ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ‘ಇಷ್ಟು ದಿನ ಕಾಂಗ್ರೆಸ್ ನಾಯಕರು ಮಲಗಿದ್ದರು. ಆದರೆ, ಈಗ ಎದ್ದು ಬಂದಿದ್ದಾರೆ’ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.