ADVERTISEMENT

ಕುಡಿತ ತಡೆಗೆ ಕಾವಲು: ಕುಡಿತ ಬಿಟ್ಟವರಿಂದಲೇ ಜಾಗೃತಿ

ಬದಲಾಯ್ತು ಗ್ರಾಮಸ್ಥರ ಜೀವನ ಶೈಲಿ

ಎಂ.ಎನ್.ಯೋಗೇಶ್‌
Published 25 ಡಿಸೆಂಬರ್ 2019, 3:56 IST
Last Updated 25 ಡಿಸೆಂಬರ್ 2019, 3:56 IST
ಉಪ್ಪುರಕನಹಳ್ಳಿ ಗ್ರಾಮಸ್ಥರಿಗೆ ಪ್ರೇರಣೆಯಾದ, ‘ಮದ್ಯ ಮಾರಾಟ ಮುಕ್ತ ಗ್ರಾಮ’ ಎನಿಸಿದ ದ್ಯಾಪಸಂದ್ರದ ಗ್ರಾಮಸ್ಥರು
ಉಪ್ಪುರಕನಹಳ್ಳಿ ಗ್ರಾಮಸ್ಥರಿಗೆ ಪ್ರೇರಣೆಯಾದ, ‘ಮದ್ಯ ಮಾರಾಟ ಮುಕ್ತ ಗ್ರಾಮ’ ಎನಿಸಿದ ದ್ಯಾಪಸಂದ್ರದ ಗ್ರಾಮಸ್ಥರು   

ಮಂಡ್ಯ: ಈ ಹಳ್ಳಿಯಲ್ಲಿ ಮದ್ಯ ಸೇವನೆ, ಮಾರಾಟ ನಿಷಿದ್ಧ. ಅಪ್ಪಿತಪ್ಪಿ, ಊರಿನ ಹೊರಗೆ ಮದ್ಯ ಸೇವನೆ ಮಾಡಿದರೆ ಊರೊಳಗೂ ಕಾಲಿಡುವಂತಿಲ್ಲ!

ತಾಲ್ಲೂಕಿನ ಉಪ್ಪುರಕನಹಳ್ಳಿಯಲ್ಲಿ ಇಂಥದೊಂದು ನಿಯಮವನ್ನು ಗ್ರಾಮಸ್ಥರೇ ಮಾಡಿಕೊಂಡಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಕೂಡ! ಅದಕ್ಕಾಗಿ ಕುಡಿತವನ್ನು ಬಿಟ್ಟವರೆಲ್ಲರೂ ಸೇರಿ ‘ಕಾವಲು ಸಮಿತಿ’ಯನ್ನು ರಚಿಸಿಕೊಂಡಿದ್ದು, ಮದ್ಯಸೇವನೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಗ್ರಾಮದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

1,300 ಜನಸಂಖ್ಯೆ ಇರುವ ಈ ಗ್ರಾಮ ‘ಮದ್ಯ ಸೇವನೆ, ಮಾರಾಟ ಮುಕ್ತ ಗ್ರಾಮ’ದತ್ತ ಹೆಜ್ಜೆ ಇಡುತ್ತಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆಯುವ ಮದ್ಯವರ್ಜನ ಶಿಬಿರದಲ್ಲಿ ಈ ಹಳ್ಳಿಯ 40 ಜನರು ಮದ್ಯ ವರ್ಜಿಸಿದ್ದಾರೆ. ಇವರೇ ಇದೀಗ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಗ್ರಾಮದ ವಿವಿಧ ಅಂಗಡಿಗಳಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಮದ್ಯ ಮಾರಾಟವನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಇದರೊಂದಿಗೆ, ಮದ್ಯ ಸೇವನೆ ತ್ಯಜಿಸಿದ ನಂತರ ತಮ್ಮ ದಿನನಿತ್ಯದ ಜೀವನದಲ್ಲಿ ಆಗಿರುವ ಬದಲಾವಣೆಗಳನ್ನು ಜನರಿಗೆ ವಿವರಿಸುತ್ತಿದ್ದಾರೆ. ಇವರ ಪ್ರೇರಣೆಯಿಂದ ಮತ್ತೆ 20 ಜನರು ಮದ್ಯಪಾನ ನಿಲ್ಲಿಸಿದ್ದಾರೆ. ಮದ್ಯ ಸೇವಿಸಿದರೆ ದಂಡ ವಿಧಿಸುವ, ಮಾರಾಟ ಪತ್ತೆಯಾದರೆ ಅಬಕಾರಿ ಇಲಾಖೆಗೆ ದೂರು ನೀಡುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.

‘ಮೊದಲು, ಬೆಳಿಗ್ಗೆ ಎದ್ದಕೂಡಲೇ ಕುಡಿಯುತ್ತಿದ್ದೆ. ರಾತ್ರಿಯಿಡೀ ಅಂಗಡಿ ಮುಂದೆಯೇ ಬಿದ್ದಿರುತ್ತಿದ್ದೆ. ಜನರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಕುಡಿಯುವುದನ್ನು ನಿಲ್ಲಿಸಿದನಂತರ ನನಗೂ ಗೌರವದ ಬದುಕು ಸಿಕ್ಕಿದೆ. ನಮ್ಮ ಊರಿನ ಇತರರೂ ಗೌರವ
ದಿಂದ ಬದುಕಬೇಕು, ಅದಕ್ಕಾಗಿಯೇ ಸಮಿತಿ ಮಾಡಿಕೊಂಡಿದ್ದೇವೆ’ ಎಂದು ಸಮಿತಿ ಸದಸ್ಯ ಎನ್‌.ಶಿವಕುಮಾರ್‌ ಹೇಳಿದರು.

ದ್ಯಾಪಸಂದ್ರ ಪ್ರೇರಣೆ: ಉಪ್ಪುರಕನಹಳ್ಳಿಯಿಂದ 3 ಕಿ.ಮೀ ದೂರದಲ್ಲಿರುವ ದ್ಯಾಪಸಂದ್ರ ಗ್ರಾಮವನ್ನು ಈಗಾಗಲೇ ‘ಮದ್ಯ ಮಾರಾಟ ಮುಕ್ತ ಗ್ರಾಮ’ ಎಂದು ಘೋಷಣೆ ಮಾಡಲಾಗಿದೆ. ಇದೇ ಪ್ರೇರಣೆಯೊಂದಿಗೆ ಉಪ್ಪುರಕನಹಳ್ಳಿ ಜನರು ಕೂಡ ಹೆಜ್ಜೆ ಇಟ್ಟಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮದ್ಯ ಸೇವನೆ ಮುಕ್ತ ಗ್ರಾಮ ರೂಪಿಸಲು ಸಂಕಲ್ಪ ತೊಟ್ಟಿದ್ದಾರೆ.

‘ಸದ್ಯ ಊರಿನಲ್ಲಿ ಮದ್ಯ ಸೇವನೆ, ಮಾರಾಟ ಸಂಪೂರ್ಣವಾಗಿ ಬಂದ್‌ ಆಗಿದೆ. ಊರ ಹೊರಗೆ ಮದ್ಯ ಸೇವಿಸಿದವರು ಸ್ವಯಂಪ್ರೇರಿತವಾಗಿ ಊರಿಗೆ ಬಾರದೇ ಹೊರಗುಳಿಯುತ್ತಿದ್ದಾರೆ. ಈ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಗ್ರಾಮಕ್ಕೆ ಆಹ್ವಾನಿಸಲು ನಿರ್ಧರಿಸಿದ್ದೇವೆ. ಅವರ ಎದುರಲ್ಲಿ ಗ್ರಾಮಸ್ಥರೆಲ್ಲರೂ ಪ್ರಮಾಣ ಮಾಡುತ್ತೇವೆ. ನಂತರ ಗ್ರಾಮದಲ್ಲಿ ಮದ್ಯ ಸೇವನೆ, ಮಾರಾಟ ಮುಕ್ತ ಗ್ರಾಮ ಎಂದು ಫಲಕ ಅಳವಡಿಸುತ್ತೇವೆ’ ಎಂದು ಕಾವಲು ಸಮಿತಿ ಅಧ್ಯಕ್ಷ ಯು.ಕೆ.ಮಹೇಶ್‌ ಹೇಳಿದರು.

‘ಉಪ್ಪುರಕನಹಳ್ಳಿ ಗ್ರಾಮದ ನಿರ್ಧಾರ ಮಾದರಿಯಾಗಿದೆ. ಇದೇ ಮಾದರಿಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಹಳ್ಳಿಗಳಲ್ಲೂ ಜಾರಿಗೊಳಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ರಾಮಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.